ನೇಮ್ಬೋರ್ಡ್ ದುರಸ್ತಿಗೆ ಆಗ್ರಹ
ಶ್ರೀನಿವಾಸಪುರ: ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ ಬಡಾವಣೆಗಳಲ್ಲಿ ಮುಖ್ಯ ರಸ್ತೆ, ಅಡ್ಡರಸ್ತೆ ಹಾಗೂ ಇತರೆ ರಸ್ತೆಗಳೆಂದು ಸಿಮೆಂಟಿನಲ್ಲಿ ತಯಾರಿಸಿದ ನಾಮಫಲಕಗಳು ಕಳಪೆ ಮಟ್ಟದ್ದಾಗಿದ್ದು, ಕೆಲವು ರಸ್ತೆಗಳಲ್ಲಿ ಬಡಾವಣೆಗಳ ನೇಮ್ಬೋರ್ಡ್ಗಳು ಮುರಿದು ಬಿದ್ದಿದ್ದರೂ ಇದರ ಬಗ್ಗೆ ಪುರಸಭೆಯವರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಪುರಸಭೆಯ ಕೌನ್ಸಿಲ್ ಸಭೆಯಲ್ಲಿ ಪಟ್ಟಣದಲ್ಲಿ ಎಲ್ಲ ಬಡಾವಣೆಗಳಲ್ಲಿ ಮುಖ್ಯರಸ್ತೆ, ಅಡ್ಡರಸ್ತೆಗಳೆಂದು ಗುರುತಿಸುವುದಕ್ಕೋಸ್ಕರ ಬಡಾವಣೆಗಳಲ್ಲಿ ನೇಮ್ಬೋರ್ಡ್ ಅಳವಡಿಸಲು ಎಲ್ಲ ಸದಸ್ಯರು ಒಮ್ಮತದೊಂದಿಗೆ ತೀರ್ಮಾನಿಸಿದ್ದರು. ಈದರೆ ಟೆಂಡರ್ ನಡೆದು ಆಗ ಇದ್ದಂಥ ಮುಖ್ಯಾಧಿಕಾರಿಗಳು ಗುತ್ತಿಗೆದಾರರಿಂದ ಮಣ್ಣು ತಿಂದು ಕಳಪೆ ಮಟ್ಟದ ನೇಮ್ಬೋರ್ಡ್ ಹಾಕಿದ್ದರು. ಇದರಿಂದ ಅವುಗಳನ್ನು ಹಾಕಿದ 15-20 ದಿನಗಳಲ್ಲಿ ಅವು ನೆಲಕ್ಕುರುಳಿವೆ. ಇವನ್ನು ಇದುವರೆಗೂ ಸರಿಪಡಿಸುವ ಗೋಜಿಗೆ ಪುರಸಭೆಯವರು ಹೋಗದ ಕಾರಣ, ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ಹರಿಸಿ ಮುರಿದು ಬಿದ್ದಿರುವ ಜಾಕೀರ್ಹುಸೇನ್ ಮೊಹಲ್ಲಾ 1ನೇ ಮುಖ್ಯ ರಸ್ತೆ ನೇಮ್ಬೋರ್ಡ್, 2ನೇ, 4ನೇ, 6ನೇ ಮುಖ್ಯರಸ್ತೆ ನೇಮ್ಬೋರ್ಡ್ಗಳನ್ನು ದುರಸ್ಥಿ ಮಾಡಿಸಿ ಸಾರ್ವಜನಿಕರನ್ನು ಗೊಂದಲಗಳಿಂದ ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಶಾಸಕ ಕೃಷ್ಣಾರೆಡ್ಡಿ ಶೋಕ
ಚಿಂತಾಮಣಿ: ಶಾಶ್ವತ ನೀರಾವರಿ ಯೋಜನೆಯ ರೂವಾರಿ ಡಾ. ಜಿ.ಎಸ್.ಪರಮಶಿವಯ್ಯ ನಿಧನಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಪಿಟೀಲ್ ಲೇಔಟ್ ಬಳಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಮಾತಾನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ನೀರು ತರುವಲ್ಲಿ ಕಳೆದ 3 ದಶಕಗಳಿಂದ ಹಂತ ಹಂತವಾಗಿ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದ ಜಿ.ಎಸ್.ಪರಮಶಿವಯ್ಯ ನಿಧನದಿಂದ ನಾಡಿನ ಜನತೆಗೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಟಿ.ಎನ್.ರಾಜಗೋಪಾಲ್, ಉಪಾಧ್ಯಕ್ಷ ದಿನಮಿಂದಪಲ್ಲಿ ಬೈರಾರೆಡ್ಡಿ, ಕಾರ್ಯದರ್ಶಿ ರಾಚಾಪುರ ಶ್ರೀನಿವಾಸ್, ಮುಖಂಡರಾದ ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಕೃಷ್ಣೋಜಿರಾವ್, ವಿ.ಅಮರ್, ಕೃಷ್ಣಮೂರ್ತಿ ಸೇರಿದಂತೆ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬಾಲ ಪ್ರತಿಭೆ ರಕ್ಷಾ ಸಾಧನೆ
ಕೋಲಾರ: ಕೇವಲ 8 ವರ್ಷಕ್ಕೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಪುಟಾಣಿ ರಕ್ಷಾ ರಮೇಶ್ ರಾಜ್ಯ ಮಟ್ಟದವರೆಗೂ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾಳೆ.
ನಗರದ ಚಿನ್ಮಯ ಶಾಲೆಯಲ್ಲಿ 3 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪುಟಾಣಿ ಬಾಲ ಕಲಾವಿದೆ. 4 ವರ್ಷದಿಂದಲೆ ಗಾಯನ ಲೋಕದ ಎಲ್ಲಾ ವೇದಿಕೆಗಳಲ್ಲಿ ಹಾಡುತ್ತಾ ಗಾಯನ ಲೋಕದಲ್ಲಿ ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಪ್ರದರ್ಶಿಸಿ ತನ್ನ ಮಧುರ ಕಂಠ ಸಿರಿಯಿಂದಲೇ ಲೀಲಾಜಾಲವಾಗಿ ಹಾಡುಗಳನ್ನು ಹಾಡುತ್ತಾ ಜನರ ಮನಸ್ಸನ್ನು ಗೆಲ್ಲುತ್ತಿದ್ದಾಳೆ.
ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಧುರಮಧುರವೀ ಮಂಜುಳಗಾನ, ಜನಶ್ರೀ ವಾಹಿನಿಯ ಕನ್ನಡ ನುಡಿನಮನ ಕಾರ್ಯಕ್ರಮ ಹಾಗೂ ಮಲೆನಾಡ ಬೆಂಗಳೂರು ನಿವಾಸಿಗಳ ಅಭಿನಂದನಾ ಕಾರ್ಯಕ್ರಮ, ಎಂ.ಎಸ್.ವಿ. ವಾಹಿನಿಯ ಹಾಡೊಂದು ನಾ ಹಾಡುವೆನು, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಯುವಸೌರಭ ಕಾರ್ಯಕ್ರಮ ಹಾಗೂ ಕಲಾಪ್ರತಿಭೋತ್ಸವದಲ್ಲಿ ರಾಜ್ಯಮಟ್ಟದವರೆಗೂ ಹಾಡಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.
ಕೋಲಾರ ಚಿನ್ಮಯ ಮಿಷನ್ ಪ್ರತಿವರ್ಷ ನಡೆಸುವ ಭಗವದ್ಗೀತೆ ಸ್ಪರ್ಧೆಯಲ್ಲಿ ತಪ್ಪದೆ ಪ್ರತಿವರ್ಷವೂ ಬಹುಮಾನ ಪಡೆದುಕೊಳ್ಳುತ್ತಿದ್ದಾಳೆ.