ಪದವಿ ಪರೀಕ್ಷೆಗಳ ಶುಲ್ಕ ಏರಿಕೆ; ಪ್ರತಿಭಟನೆ
ಶಿಡ್ಲಘಟ್ಟ: ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪದವಿ ಪರೀಕ್ಷೆಗಳ ಶುಲ್ಕ ಏರಿಕೆ ಮಾಡಿ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಎಸ್‌ಎಫ್‌ಐ ಸಂಘಟನೆಯ ಕಾರ್ಯಕರ್ತರು ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಎ.ನಾರಾಯಣಸ್ವಾಮಿ ಮುಖಾಂತರ ಮನವಿ ಸಲ್ಲಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಶುಲ್ಕ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕಿದ್ದ ರಾಜ್ಯ ಸರ್ಕಾರ ಪೂರ್ಣ ಶುಲ್ಕ ಕಟ್ಟುವಂತೆ ಸುತ್ತೋಲೆ ಹೊರಡಿಸಿದೆ. ಶುಲ್ಕ ಮರುಪಾವತಿ ಸೌಲಭ್ಯ ಪಡೆಯಬೇಕಾದರೆ ಅಂಕಗಳನ್ನು ಮಾನದಂಡ ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬೋಧನಾಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾಶುಲ್ಕ, ಗ್ರಂಥಾಲಯ ಶುಲ್ಕಗಳು ವಿನಾಯ್ತಿಗೆ ಅರ್ಹ ಶುಲ್ಕಗಳಾಗಿವೆ. ಬಹುತೇಕ ಬಡವರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕದ ರೂಪದಲ್ಲಿ ದರೋಡೆ ಮಾಡಲಾಗುತ್ತಿದೆ. ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಪರಿಸ್ಥಿತಿಯಲ್ಲಿ ಈ ರೀತಿ ವಿದ್ಯಾರ್ಥಿಗಳ ಮೇಲೆ ಹೊರೆ ಹಾಕುತ್ತಿರುವುದು ಸರಿಯಲ್ಲ. ಆರ್ಥಿವಾಗಿ ಹಿಂದುಳಿದಿರುವ ಕಾರಣದಿಂದಲೇ ಶುಲ್ಕ ವಿನಾಯಿತಿ ಕೋರಿ ಅರ್ಜಿ ಹಾಕಿರುತ್ತಾರೆ.
ಅಂಕಗಳ ಆಧಾರದ ಮೇಲೆ ಜಾರಿ ಮಾಡಿದರೆ ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು. ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಕುಂದಲಗುಕರ್ ಮುನೀಂದ್ರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜಂಗಾಲಪಲ್ಲಿ ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ರವಿ.ಜಿ.ಎನ್, ಜಿಲ್ಲಾ ಉಪಾಧ್ಯಕ್ಷರಾದ ಚಿಂತಾಮಣಿ ಬಾಬುರೆಡ್ಡಿ, ಗುಡಿಬಂಡೆ ಈಶ್ವರಪ್ಪ, ತಾಲೂಕು ಅಧ್ಯಕ್ಷ ರವಿ, ವೆಂಕಟೇಶ್, ಭಾರ್ಗವಿ, ವೀಣಾ, ಜ್ಯೋತಿ, ವೇಣು, ಮಂಜುನಾಥ್, ಶ್ವೇತಾ ಇತರರಿದ್ದರು.