ಬಾಲ ಪ್ರತಿಭೆ ರಕ್ಷಾ ಸಾಧನೆ
ಕೋಲಾರ: ಕೇವಲ 8 ವರ್ಷಕ್ಕೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಪುಟಾಣಿ ರಕ್ಷಾ ರಮೇಶ್ ರಾಜ್ಯ ಮಟ್ಟದವರೆಗೂ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾಳೆ.
ನಗರದ ಚಿನ್ಮಯ ಶಾಲೆಯಲ್ಲಿ 3 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪುಟಾಣಿ ಬಾಲ ಕಲಾವಿದೆ. 4 ವರ್ಷದಿಂದಲೆ ಗಾಯನ ಲೋಕದ ಎಲ್ಲಾ ವೇದಿಕೆಗಳಲ್ಲಿ ಹಾಡುತ್ತಾ ಗಾಯನ ಲೋಕದಲ್ಲಿ ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಪ್ರದರ್ಶಿಸಿ ತನ್ನ ಮಧುರ ಕಂಠ ಸಿರಿಯಿಂದಲೇ ಲೀಲಾಜಾಲವಾಗಿ ಹಾಡುಗಳನ್ನು ಹಾಡುತ್ತಾ ಜನರ ಮನಸ್ಸನ್ನು ಗೆಲ್ಲುತ್ತಿದ್ದಾಳೆ.
ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಧುರಮಧುರವೀ ಮಂಜುಳಗಾನ, ಜನಶ್ರೀ ವಾಹಿನಿಯ ಕನ್ನಡ ನುಡಿನಮನ ಕಾರ್ಯಕ್ರಮ ಹಾಗೂ ಮಲೆನಾಡ ಬೆಂಗಳೂರು ನಿವಾಸಿಗಳ ಅಭಿನಂದನಾ ಕಾರ್ಯಕ್ರಮ, ಎಂ.ಎಸ್.ವಿ. ವಾಹಿನಿಯ ಹಾಡೊಂದು ನಾ ಹಾಡುವೆನು, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಯುವಸೌರಭ ಕಾರ್ಯಕ್ರಮ ಹಾಗೂ ಕಲಾಪ್ರತಿಭೋತ್ಸವದಲ್ಲಿ ರಾಜ್ಯಮಟ್ಟದವರೆಗೂ ಹಾಡಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.
ಕೋಲಾರ ಚಿನ್ಮಯ ಮಿಷನ್ ಪ್ರತಿವರ್ಷ ನಡೆಸುವ ಭಗವದ್ಗೀತೆ ಸ್ಪರ್ಧೆಯಲ್ಲಿ ತಪ್ಪದೆ ಪ್ರತಿವರ್ಷವೂ ಬಹುಮಾನ ಪಡೆದುಕೊಳ್ಳುತ್ತಿದ್ದಾಳೆ.