ಶಾಶ್ವತ ನೀರಾವರಿಯ ಮೊದಲ ಕೊಂಡಿ
ಮಾಲೂರು: ಡಾ. ಜಿ.ಎಸ್.ಪರಮಶಿವಯ್ಯ ರಾಜ್ಯ ಕಂಡ ಅತ್ಯುತ್ತಮ ನೀರಾವರಿ ತಜ್ಞರಾಗಿದ್ದು, ಅವರ ಸಾವಿನಿಂದ ಶಾಶ್ವತ ನೀರಾವರಿ ಯೋಜನೆಯ ಮೊದಲ ಕೊಂಡಿ ಕಳಚಿದಂತಾಗಿದೆ ಎಂದು ಶಾಶ್ವತ ನೀರಾವರಿ ಯೋಜನೆ ಹೋರಾಟ ಸಮಿತಿಯ ಗೌರವಾಧ್ಯಕ್ಷ ಡಾ. ತ್ಯಾವನಹಳ್ಳಿ ಗೋಪಾಲ್ ಗೌಡ ಹೇಳಿದರು.
ಅವರು ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪಟ್ಟಣದ ಕೃಷಿಕ ಸಮಾಜದಲ್ಲಿ ಮಂಗಳವಾರ ನೀರಾವರಿ ತಜ್ಞ ಡಾ. ಜಿ.ಎಸ್.ಪರಮಶಿವಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
40 ವರ್ಷಗಳ ಹಿಂದೆಯೇ ಬಯಲು ಸೀಮೆಯು ನೀರಿಲ್ಲದೆ ಬರಡಾಗಲಿದೆ ಎಂದು, ಈ ಸೀಮೆಗಳ ಪ್ರದೇಶಗಳಲ್ಲಿ ಶಾಶ್ವತ ನೀರಾವರಿ ಯೋಜನೆ ತರಬೇಕೆಂದು ಪಟ್ಟು ಹಿಡಿದಿದ್ದ ಡಾ. ಪರಮಶಿವಯ್ಯ ಅವರು ಅಂದಿನಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಲ್ಲ ಸರ್ಕಾರಗಳಿಗೂ ವರದಿ ನೀಡುತ್ತ ಬಂದಿದ್ದರು. ಆದರೆ ಅವರ ವರದಿಯ ಬಗ್ಗೆ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ತೋರಿದ ಪರಿಣಾಮದಿಂದ ಈಗ ಬಯಲು ಸೀಮೆಯ ಒಂಬತ್ತು ಜಿಲ್ಲೆಗಳಲ್ಲಿ ಶಾಶ್ವತ ಬರಗಾಲ ಸಂಭವಿಸುತ್ತಿದೆ. ಪರಮಶಿವಯ್ಯ ಅವರಿಗೆ ಶಾಂತಿ ದೊರಕಬೇಕಾದರೆ ಅವರ ವರದಿಯಂತೆ ಯೋಜನೆಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಮಾತನಾಡಿ, ಡಾ.ಪರಮಶಿವಯ್ಯ ಮಂಡಿಸಿರುವ ಶಾಶ್ವತ ನೀರಾವರಿ ಯೋಜನೆಯಲ್ಲಿ ಎತ್ತಿನ ಹೊಳೆ ಮೊದಲ ಭಾಗವಾಗಿದೆ. ಇಂಥ ಮಹನೀಯ ಅಗಲಿರುವುದು ಬಯಲುಸೀಮೆ ರೈತಾಪಿ ಜನಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ರೈತ ಸಂಘದ ಅಧ್ಯಕ್ಷ ಬೆ.ರಮೇಶ್, ಕಸಾಪ ಜಿಲ್ಲಾ ಗೌರವಾಧ್ಯಕ್ಷ ಅಶ್ವಥ್ ರೆಡ್ಡಿ, ಪ್ರಗತಿ ಪರ ರೈತ ಕೋಡೂರು ಗೋಪಾಲ್ ಮಾತನಾಡಿದರು. ಕಾಟೇರಿ ಮುನಿಸ್ವಾಮಿ, ಪ್ಲಾಸ್ಟಿಕ್ ನಿರ್ಮೂಲನ ಸಮಿತಿ ಅಧ್ಯಕ್ಷ ಮುನಿಸ್ವಾಮಿ, ಪರಮೇಶ್, ಗುಡ್ನಹಳ್ಳಿ ವೆಂಕಟೇಶ್ ಇದ್ದರು.
ತಮಗೆ ಗುರುವಿನಂತಿದ್ದ ಡಾ. ಪರಮಶಿವಯ್ಯನವರ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.ಅವರು ರೂಪಿಸಿರುವ ನೀರಾವರಿ ವರದಿಯನ್ನು ಅನುಷ್ಠಾನಗೊಳಿಸಿದಾಗ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಹೋರಾಟಗಳು ಮುಂದುವರೆಯುತ್ತದೆ.
ಟಿ ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು