ಸಿಇಟಿ ಪರೀಕ್ಷಾ ಶುಲ್ಕ ಪಾವತಿಗೆ ಕಾಲಾವಕಾಶ
ಕೋಲಾರ: ದ್ವಿತೀಯ ಪಿಯುಸಿ ಪರೀಕ್ಷೆ ಮಾ.12ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷಾ ಸಮಯದಲ್ಲೇ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಶುಲ್ಕ ಪಾವತಿ, ಅರ್ಜಿ ಭರ್ತಿ, ಆನ್ಲೈನ್ ಮೂಲಕ ಬ್ಯಾಂಕ್ ಚಲನ್ಅನ್ನು ಸಿಇಟಿಗೆ ತಲುಪಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೊಂದರೆ ಆಗುವುದರಿಂದ ಸರ್ಕಾರ ಸಿಇಟಿ ಪರೀಕ್ಷಾ ಶುಲ್ಕ ಪಾವತಿಗೆ ಗಡುವು ನೀಡಬೇಕೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರ ಸಿಇಟಿ ಪರೀಕ್ಷೆಗೆ ಶುಲ್ಕ ಪಾವತಿಸಲಾಗುತ್ತಿತ್ತು. ಆದರೆ, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷಾ ಸಮಯದಲ್ಲೇ ಸಿಇಟಿ ಪರೀಕ್ಷಾ ಶುಲ್ಕ ಪಾವತಿಗಾಗಿ ಬ್ಯಾಂಕುಗಳಿಗೆ ಹೋಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಗಿದೆ, ಜೊತೆಗೆ ಪರೀಕ್ಷೆ ನಡೆಯುವಾಗ ಬ್ಯಾಂಕುಗಳಿಗೆ ಹೇಗೆ ಹೋಗಲು ಸಾಧ್ಯವೆಂದು ಪ್ರಶ್ನಿಸಿರುವ ಪೋಷಕರು, ವಿಜ್ಞಾನ ವಿಭಾಗದ ಮಕ್ಕಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ, ಬುಧವಾರದಿಂದ ಪರೀಕ್ಷೆ ಬರೆಯಬೇಕಾಗಿದೆ, ಈ ಮಧ್ಯೆ ಸಿಇಟಿ ಕಡೆ ಗಮನ ನೀಡುವುದಕ್ಕೆ ಸಮಯದ ಅಭಾವ ಹಾಗೂ ಪರೀಕ್ಷಾ ಒತ್ತಡದಲ್ಲಿ ಇರುತ್ತಾರೆಯಾದ್ದರಿಂದ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ತಕ್ಷಣವೇ ಸಿಇಟಿ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳುವುದಕ್ಕೆ ಮತ್ತು ಅರ್ಜಿಗಳನ್ನು ಸ್ವೀಕರಿಸುವುದಕ್ಕೆ ಅವಕಾಶ ನೀಡಿದರೆ ಮಕ್ಕಳು ನೆಮ್ಮದಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುವಂತಾಗುತ್ತದೆ, ಇದರಿಂದ ಪೋಷಕರ ಮೇಲಿನ ಒತ್ತಡವೂ ತಪ್ಪುತ್ತದೆ ಎಂದು ಸಹ್ಯಾದ್ರಿ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.
ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳಿಗೆ ತಾಕೀತು
ಮುಳಬಾಗಲು: ಕಂದಾಯ ಇಲಾಖೆ ನೌಕರರು ರೈತರ ಸಣ್ಣ ಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಸತಾಯಿಸದೆ ಕೆಲಸ ಮಾಡಿಕೊಡಲು ನೂತನ ತಹಶೀಲ್ದಾರ್ ಕೆ.ಏಕೇಶ್ಬಾಬು ತಾಖೀತು ಮಾಡಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನ 5 ಹೋಬಳಿಗಳ ಪೈಕಿ ಎರಡು ಹೋಬಳಿಗಳಲ್ಲಿ ಕಂದಾಯ ಅದಾಲತ್ ಮುಗಿದಿದ್ದು ಮಿಕ್ಕ ಕಸಬಾ,ತಾಯಲೂರು ಮತ್ತು ದುಗ್ಗಸಂದ್ರ ಹೋಬಳಿಗಳಲ್ಲಿ ಚುನಾವಣೆ ನಂತರ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದರು. ಚುನಾವಣೆ ಸಮಯವಾದ ಕಾರಣ ಕಂದಾಯ ಇಲಾಖೆಯ ನೌಕರರು ಚುನಾವಣೆ ಪ್ರಕ್ರಿಯೆಯ ಎಲ್ಲಾ ಕೆಲಸಗಳಲ್ಲೂ ಭಾಗವಹಿಸಿ ಕೆಲಸ ನಿರ್ವಹಿಸಬೇಕು ಎಂದರು. ಉಪ ತಹಶೀಲ್ದಾರ್ಗಳಾದ ವೆಂಕಟೇಶ್ ಹಾಗೂ ಕೊಂಡಪ್ಪ ತಾಲೂಕು ಕಚೇರಿಯ ವಿವಿಧ ವಿಭಾಗಗಳನ್ನು ತಹಶೀಲ್ದಾರ್ಗೆ ಪರಿಚಯಿಸಿದರು.
ಇಂದು ವಿದ್ಯುತ್ ವ್ಯತ್ಯಯ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ, ಕೈಗಾರಿಕ ಪ್ರದೇಶ ಮತ್ತು ನಲ್ಲಿಮರದಹಳ್ಳಿ 66.11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಟಿ.ಎಲ್.ಅಂಡ್ ಎಸ್.ಎಸ್.ವತಿಯಿಂದ ತ್ರೈಮಾಸಿಕ ಪಾಲನ ಕಾಮಗಾರಿ ಕೈಗೊಂಡಿರುವುದರಿಂದ ಮಾ.12 ರಂದು ಬೆಳಿಗ್ಗೆ 10ರಿಂದ 5 ಗಂಟೆವರೆಗೆ ಚಿಕ್ಕಬಳ್ಳಾಪುರ ನಗರ, ಕೈಗಾರಿಕಾ ಪ್ರದೇಶ, ನಂದಿ, ನಂದಿಬೆಟ್ಟ, ಕುಪ್ಪಹಳ್ಳಿ, ಮುದ್ದೇನಹಳ್ಳಿ, ಕೆಳಗಿನ ತೋಟ, ಕೊಂಡೇನಹಳ್ಳಿ, ಡಿ.ಹೊಸೂರು, ಜಕ್ಕಲಮಡಗು, ಶ್ರೀರಾಮಪುರ, ಹೊಸಹುಡ್ಯ, ಜಾತಾವಾರ, ನಾಯನಹಳ್ಳಿ, ಮಂಚನಬಲೆ, ದಿಬ್ಬೂರು, ಅಡವಿಗೊಲ್ಲವಾರಹಳ್ಳಿ, ತಿಪ್ಪೇನಹಳ್ಳಿ, ಪಟ್ರೇನಹಳ್ಳಿ, ತೀರ್ನಹಳ್ಳಿ, ಮುಷ್ಟೂರು, ರಾಮದೇವರಗುಡಿ, ಕಳವಾರ, ಹಾರೋಬಂಡೆ, ಗುಂಡ್ಲಗುರ್ಕಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಬೆವಿಕಂ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪತ್ನಿ ಹತ್ಯೆಗೆ ಯತ್ನಿಸಿ ಪತಿ ಪರಾರಿ
ಬಂಗಾರಪೇಟೆ: ಗಂಡನೇ ತನ್ನ ಪತ್ನಿಯ ಕೊಲೆ ಮಾಡಲು ಯತ್ನ ಮಾಡಿರುವ ಘಟನೆ ತಾಲೂಕಿನ ಬಾವರಹಳ್ಳಿಯಲ್ಲಿ ಸೋಮವಾರ ನಡೆದಿದೆ. ಬಾವರಹಳ್ಳಿಯ ಸುನಂದ ಎಂಬಾಕೆಯ ವಿವಾಹ ತುಮುಲು ಗ್ರಾಮದ ಮುನಿಯಪ್ಪರೊಂದಿಗೆ ಆಗಿತ್ತು. ನಂತರ ಇಬ್ಬರಲ್ಲಿಯೂ ಸಾಮರಸ್ಯ ಇರದೆ ಆಗಾಗ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತಿರುವ ಪತ್ನಿ ಸುನಂದ ತವರು ಮನೆಗೆ ಬಂದಿದ್ದಳು. ಸೋಮವಾರ ಸುನಂದ ಕೂಲಿ ಕೆಲಸಕ್ಕೆ ಹೋಗಲು ಗ್ರಾಮದ ಹೊರವಲಯಕ್ಕೆ ಬಂದಾಗ ಗಂಡ ಅಲ್ಲಿರುವ ನೀಲಗಿರಿ ತೋಪಿನಲ್ಲಿ ಕಾಯುತ್ತಿದ್ದು, ಮನೆಗೆ ಬಾರದಿದ್ದರೆ ಕೊಲೆ ಮಾಡುವುದಾಗಿ ಬೆಕರಿಕೆ ಹಾಕಿದ ಎನ್ನಲಾಗಿದೆ. ಇದಕ್ಕೆ ಸುನಂದ ವಿರೋಧ ವ್ಯಕ್ತಪಡಿಸಿದಾಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಕೈ ಅಡ್ಡಿಪಡಿಸಿದಾಗ ಎಡಕೈನ ಮೂರು ಬೆರಳುಗಳು ತುಂಡಾಗಿವೆ. ಭಯಭೀತನಾದ ಮುನಿಯಪ್ಪ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಾಗಿದೆ.