ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ

Vishwanath S
Updated On : 13 Mar 2014, 1:48 am

ಚಿಂತಾಮಣಿ: ತಾಲ್ಲೂಕಿನ ಕೆ. ರಾಗುಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅವರಿಂದ ಪರೀಕ್ಷಾ ಸಿದ್ಧತೆ ಹಾಗೂ ಮಾರ್ಗದರ್ಶನದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಆನಂದ್ ಅವರು ಮಾತನಾಡುತ್ತಾ, ಪರೀಕ್ಷೆಗಳು ವಿದ್ಯಾರ್ಥಿಗಳ ಮಟ್ಟವನ್ನು ಅಳೆಯುವ ಯೋಗ್ಯತಾ ಮಾಪನ. ಪರೀಕ್ಷೆ ಬರೆಯುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎಂದರು.
ಚಂಚಲತೆಯಿಂದ ವೈಫಲ್ಯ: ವರ್ಷಪೂರ್ತಿ ಓದಿದ್ದನ್ನು ಪರೀಕ್ಷೆಯಲ್ಲಿ ಮೂರು ಗಂಟೆಗಳಲ್ಲಿ ಬರೆಯಬೇಕಾಗಿರುವುದರಿಂದ ಇದಕ್ಕೆ ತಕ್ಕ ಪೂರ್ವ ಸಿದ್ಧತೆಗಳನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ಏಕಾಗ್ರತೆ ಇಲ್ಲದ ಓದು ಜೀರ್ಣವಾಗದ ಆಹಾರದಂತೆ. ವಿದ್ಯಾರ್ಥಿಗಳು ಅನುವಿಸುವ ವೈಫಲ್ಯ ಅವರ ಏಕಾಗ್ರತೆ ಲೋಪದಲ್ಲಿದೆ ಎಂದು ಕಿವಿಮಾತು ಹೇಳಿದರು.  ಪರೀಕ್ಷಾ ಸಿದ್ದತೆ ಉಪಾನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಉಪಯುಕ್ತ ಸಲಹೆ, ಏಕಾಗ್ರತೆ ಬೆಳೆಸಿಕೊಳ್ಳಲು ಮಾರ್ಗೋಪಾಯಗಳನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸಿ.ಎ. ಸುಭಾಷ್‌ಚಂದ್ರ ಬೋಸ್, ಸಹ ಶಿಕ್ಷಕರಾದ ರಾಜ್‌ಕುಮಾರ್ ಕವಟಗಿ, ಕೆ.ಎಸ್. ಮಂಜುನಾಥ್, ಲಕ್ಷ್ಮೀ ನಾರಾಯಣ,ಶ್ರೀನಿವಾಸ, ರವೀಂದ್ರನಾಥ್, ಕೆ.ಇ. ರವಿಕುಮಾರ್ ಉಪಸ್ಥಿತರಿದ್ದರು.
ಜೀವನದಲ್ಲಿ ಬೇಸತ್ತು ಮಹಿಳೆ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಬೇಸತ್ತು ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಗರದ ಇಡ್ಲಿಪಾಳ್ಯದಲ್ಲಿ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ನಗರದ ಇಡ್ಲಿಪಾಳ್ಯದ ನಿವಾಸಿ ಗಣೇಶ್ ಎಂಬವರ ಪತ್ನಿ ಶಾಂತಮ್ಮ(35) ಎಂಬಾಕೆ ಜೀವನದಲ್ಲಿ ಬೇಸತ್ತು ಮನೆಯಲ್ಲಿಯೇ ನೇಣಿಗೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನ್ನ ಕುಟುಂಬದಲ್ಲಿ ಮಗಳು ಪಕ್ಕದ ಮನೆಯ ಯುವಕನ ಜೊತೆ ಹೋಗಿ ಮದುವೆ ಮಾಡಿಕೊಂಡಿದ್ದ ಕಾರಣಕ್ಕಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆಯ ಸಬ್‌ಇನ್ಸೆಪೆಕ್ಟರ್ ಮುರಳಿ ಕೇಸ್ ದಾಖಲಿಸಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಸ್ತಿ ವಿವಾದ; ಕೊಲೆ ಯತ್ನ
ಕೆಜಿಎಫ್: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಮುನಿವೆಂಕಟಪ್ಪ ಹಾಗೂ ವೆಂಕಟರಾಮಪ್ಪ ಅವರಿಗೆ ಆಸ್ತಿ ವಿಚಾರದಲ್ಲಿ ಆಗಾಗ ಜಗಳವಾಗುತ್ತಿದ್ದು ವೆಂಕಟರಾಮಪ್ಪ ಕೊಲೆ ಬೆದರಿಕೆ ಹಾಕುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಮುನಿವೆಂಕಟಪ್ಪ ತಮ್ಮ ದ್ವಿಚಕ್ರ ವಾಹನದಲ್ಲಿ ಬೇತಮಂಗಲ ಗ್ರಾಮದಿಂದ ಕಳ್ಳಿಕುಪ್ಪ ಗ್ರಾಮಕ್ಕೆ ಹೋಗುತ್ತಿದ್ದಾಗ ಮುನಿವೆಂಕಟಪ್ಪ ಅಡ್ಡಗಟ್ಟಿ ಮಚ್ಚನ್ನು ತಲೆಗೆ ಬೀಸಿದ್ದಾರೆ. ಮುನಿವೆಂಕಟಪ್ಪ ತಪ್ಪಿಸಿಕೊಂಡಿದ್ದು ಕೈಯನ್ನು ಅಡ್ಡ ಇಟ್ಟಾಗ ಬೆರಳು ಮುರಿದು ಗಾಯಗೊಂಡಿರುವುದಾಗಿ ವೆಂಕಟರಾಮಪ್ಪ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ
ಮಾಲೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಗ್ರಹಾರ ಹೂಸಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.   ಮೃತಳನ್ನು ಎ.ವಿ. ಲಕ್ಷ್ಮಿ(22) ಎಂದು ಗುರುತಿಸಲಾಗಿದೆ. ತಾಲೂಕಿನ ಅರಳೇರಿ ಗ್ರಾಮದ ವಜ್ರಮುನೇಗೌಡ ಹಾಗೂ ನಂಜಮ್ಮ ದಂಪತಿಗಳ ನಾಲ್ಕನೇ ಮಗಳನ್ನು ತಾಲೂಕಿನ ಅಗ್ರಹಾರ ಹೂಸಹಳ್ಳಿ ಗ್ರಾಮದ ನಂಜುಂಡಪ್ಪ ಹಾಗೂ ಪದ್ಮಮ್ಮರ ಎರಡನೇ ಮಗ ಗಿರೀಶ್‌ನಿಗೆ ಕೊಟ್ಟು ಬಂಗಾರಪೇಟೆ ತಾಲೂಕಿನ ಕೋಟಿ ಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡು ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ವೇಳೆಯಲ್ಲಿ ಗಂಡಿನ ಮನೆಯವರು ಕೇಳಿದ್ದ ಎಲ್ಲವನ್ನೂ ಪೂರೈಸಿ ಮದುವೆ ಮಾಡಿಕೊಟ್ಟಿದ್ದರು. ಇವರಿಬ್ಬರಿಗೂ ಒಂದೂವರೆ ವರ್ಷದ ಗಂಡು ಮಗು ಇದೆ. ಗಂಡಿನ ಮನೆಯವರು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದು, ಕಳೆದ ವಾರದ ಹಿಂದೆ ಹಣ ಬೇಕು ಎಂತಲೇ ತವರು ಮನೆಗೆ ಬಂದಿದ್ದಳು ಎಂದು ಸ್ಥಳೀಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವ ಮೃತಳ ತಂದೆ ವಜ್ರಮುನೇಗೌಡ ರವರು ಹಣ ಇಲ್ಲ ಎಂದು ಹೇಳಿ ಕಳುಹಿಸಿರುವುದನ್ನೇ ದೊಡ್ಡದು ಮಾಡಿರುವ ಆಳಿಯ ಗಿರೀಶ್ ಹಾಗೂ ಆತನ ತಂದೆ-ತಾಯಿ ಮಗಳನ್ನು ನೇಣಿಗೆ ಬಿಗಿದು ಸಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಹಸೀಲ್ದಾರ್ ಶಿವು ಕುಮಾರ್ ಮಹಜರ್ ನಡೆಸಿದ್ದು, ಸ್ಥಳೀಯ ಎಸ್‌ಐ ದಯಾನಂದ್ ಮೃತಳ ಗಂಡ ಗಿರೀಶ್, ಅತ್ತೆ ಪದ್ಮಮ್ಮ ಹಾಗೂ ಮಾವ ನಂಜುಂಡಪ್ಪ ಅವರನ್ನು ಬಂಧಿಸಿ ನ್ಯಾಯಾಂದ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಷ್ಪಕ್ಷವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಕರೆ
ಮುಳಬಾಗಲು: ಮುಂಬರುವ ಲೋಕಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ತಹಶೀಲ್ದಾರ್ ಕೆ.ಏಕೇಶ್‌ಬಾಬು ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಏಕೇಶ್‌ಬಾಬು, ತಾ. ಮಟ್ಟದ ಎಲ್ಲ ಅಧಿಕಾರಿಗಳು ತಮಗೆ ನಿಯೋಜಿಸಿರುವ ಕೆಲಸಗಳನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ ಚುನಾವಣೆ ಉತ್ತಮವಾಗಿ ನಡೆಯಲು ಸಾಧ್ಯ. ಅಧಿಕಾರಿಗಳು ನಿಷ್ಪಕ್ಷವಾಗಿ ಕೆಲಸ ಮಾಡಬೇಕು. ಕಾನೂನುಬಾಹಿರ ಮತದಾರರಿಗೆ ಅಭ್ಯರ್ಥಿಗಳ ಪರವಾದವರು ಹಣ, ಮದ್ಯ ಹಾಗೂ ಇತರೆ ವಸ್ತುಗಳನ್ನು ಹಂಚುವುದಕ್ಕೆ ತಡೆಯೊಡ್ಡಬೇಕು ಎಂದರು.
ಕೇಂದ್ರ ಚುನಾವಣೆ ಅಯೋಗದ ಮಾರ್ಗಸೂಚಿಯಂತೆ ಪ್ರತಿ ಮತಗಟ್ಟೆಯನ್ನು ಶಾಂತಿಯುತವಾದ ಚುನಾವಣೆಗೆ ಸಜ್ಜುಗೊಳಿಸಬೇಕು ಎಂದರು.
ಬಡವರನ್ನು ಮುಂದೆ ತನ್ನಿ; ರೆಡ್ಡಿ
ಕೆಜಿಎಫ್: ರೆಡ್ಡಿ ಜನಾಂಗದಲ್ಲಿರುವ ಎಲ್ಲ ಬಡವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ತರಬೇಕಾದ ಕೆಲಸವನ್ನು ರೆಡ್ಡಿ ಜನಾಂಗದ ಮುಖಂಡರು ಮಾಡಬೇಕು ಎಂದು ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳದ ಅಧ್ಯಕ್ಷ ಸೋಮಶೇಖರರೆಡ್ಡಿ ಹೇಳಿದರು. ರೆಡ್ಡಿ ಜನಾಂಗದವರು ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಶಿಭಿಕ ವಾಹನೋತ್ಸವದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ನಮ್ಮ ಕುಟುಂಬದವರು ಸುಮಾರು 20 ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದೇವೆ. ಅದೇ ರೀತಿ ಜನಾಂಗದ ಹಿತಾಸಕ್ತಿಗೆ ಎಲ್ಲರೂ ರಾಜಕೀಯ ಪಕ್ಷಗಳನ್ನು ಬದಿಗೊತ್ತಿ ಒಂದಾಗಬೇಕು ಎಂದರು. ನಮ್ಮ ಸಹೋದರ ಜನಾರ್ದನರೆಡ್ಡಿ ತಿರುಪತಿ ದೇವರಿಗೆ ಪ್ರಪಂಚದಲ್ಲೇ ಯಾರೂ ಕೊಡಲಾಗದ ದಾನ ಕೊಡಬೇಕು ಎಂದು ಬಂಗಾರದ ಕಿರೀಟ ಮಾಡಿಸಿಕೊಟ್ಟರು. ಆದರೆ ಆ ದೇವರು ಅವರಿಗೆ ತೊಂದರೆ ಮಾಡಿದ. ಆದರೂ ದೇವರು ಕೆಟ್ಟ ದಿನಗಳನ್ನು ನೀಗಿ ಒಳ್ಳೆಯದನ್ನು ಮಾಡುತ್ತಾನೆ ಎಂಬ ನಂಬಿಕೆಯಲ್ಲಿ ನಾವಿದ್ದೇವೆ ಎಂದರು.ಇದೇ ವೇಳೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುಖಂಡರಾದ ಆಂಜನೇಯರೆಡ್ಡಿ, ಪ್ರಸನ್ನರೆಡ್ಡಿ, ಕೃಷ್ಣಾರೆಡ್ಡಿ, ವೆಂಕಟರಾಮರೆಡ್ಡಿ, ರಾಘವೇಂದ್ರರೆಡ್ಡಿ, ಸುಬ್ಬಾರೆಡ್ಡಿ ಇದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ರಚನೆ
ಮಾಲೂರು: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿಭಾಗದ ನೂತನ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲಾಗಿದೆ.   ಶಾಸಕ ಮಂಜುನಾಥ್ ಗೌಡ ರವರ ಆದೇಶದಂತೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಎಂ.ಎನ್. ವಿಜಯಕುಮಾರ್(ಕೇಬಲ್) ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಎಂ.ಜಿ. ಶ್ರೀಧರ್, ಸಿ.ಪಿ.ಶ್ರೀನಿವಾಸ್, ವೆಂಕಟೇಶ್, ಎನ್.ಟಿ. ಪಾಲಾಕ್ಷಯ್ಯ, ಮುನಿಸ್ವಾಮಿ, ಚಂದ್ರು, ಅಪ್ಪಯ್ಯಗೌಡ, ಲತಾ ಬಾಯಿ ಆಯ್ಕೆಯಾಗಿದ್ದಾರೆ.
ಕಾಮಗಾರಿ ಶೀಘ್ರ ಪ್ರಾರಂಭ
ಮಾಲೂರು: ಪಟ್ಟಣದ ಮಧ್ಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಗಜಾಗುಂಡ್ಲ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ಶುಕ್ರವಾರ ಪ್ರಾರಂಭವಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹೇಳಿದರು. ಅವರು ತಮ್ಮ ಕಚೇರಿ ಅಧಿಕಾರಿಗಳೊಡನೆ ಗಜಾಗುಂಡ್ಲ ಕಲ್ಯಾಣಿಗೆ ಬುಧವಾರ ಭೇಟಿ ನೀಡಿ ಮಾತನಾಡುತ್ತ 20 ಲಕ್ಷ ವೆಚ್ಚದಲ್ಲಿ ಕಲ್ಯಾಣಿಯನ್ನು ದುರಸ್ತಿಗೊಳಿಸುವ ಕಾಮಗಾರಿ ಶುಕ್ರವಾರದಿಂದ ಪ್ರಾರಂಭವಾಗಲಿದ್ದು, ಕಳೆದ ಎರಡು ದಶಕಗಳಿಂದ ಮುಚ್ಚಿಹೋಗಿದ್ದ ಕಲ್ಯಾಣಿಗೆ ಮುಕ್ತಿ ಸಿಗಲಿದೆ ಎಂದರು. ಸಹಾಯಕ ಅಭಿಯಂತರ ಮುರಳೀಧರ್, ಗುತ್ತಿಗೆದಾರರ ಪ್ರಕಾಶ್,ಎಲ್. ಜಾದವ್, ಸಿಂಗ್ ಇದ್ದರು.
ಮರಳು ದಂಧೆ ಸ್ಥಳಕ್ಕೆ ಅಧಿಕಾರಿ ಭೇಟಿ
ಟೇಕಲ್: ಅರಸಿಕೆರೆಯಲ್ಲಿ ನಡೆಯುತ್ತಿದ್ದ ಅವ್ಯಾಹತ ಮರಳು ದಂಧೆ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಟೇಕಲ್ ನಾಡಕಚೇರಿಯ ಕಂದಾಯ ಅಧಿಕಾರಿ ಶ್ರೀನಿವಾಸ್ ಮತ್ತು ಅವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ  ಮಾತನಾಡಿದ ಅವರು, ಟೇಕಲ್‌ನ ತಿಮ್ಮನಾಯಕನಹಳ್ಳಿ ಕೆರೆಯಲ್ಲಿ ಮರಳು ಯತೇಚ್ಛವಾಗಿ ತೆಗೆಯುತ್ತಿದ್ದು, ಈ ಬಗ್ಗೆ ಸ್ಥಳ ಮಹಜರು ನಡೆಸಿ, ನಂತರ, ಇದನ್ನು ತಾಲ್ಲೂಕು ತಹಸೀಲ್ದಾರ್ ಅವರ ಗಮನಕ್ಕೆ ಕೊಡಲಾಗುವುದೆಂದರು. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ ಎಂದರು. ನೆನ್ನೆಯಷ್ಟೇ ಈ ಬಗ್ಗೆ 'ಕನ್ನಡಪ್ರಭ' ವರದಿ ಮಾಡಿತ್ತು.
ಶ್ವಾನಸ್ಪರ್ಧೆ ಪ್ರಶಸ್ತಿ
ಮುಳಬಾಗಲು: ಕೋಲಾರದ ಮೇಧೋಡಿಸ್ ಶಾಲಾ ಮೈದಾನದಲ್ಲಿ ಅಯೋಜಿಸಿದ್ದ ಜಿಲ್ಲಾ ಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಮುಳಬಾಗಲು ಪಟ್ಟಣದ ವೈದ್ಯ ಆವಣೆ ಡಾ. ಕೆ.ಎಲ್.ನವೀನ್ ಸಾಕಿದ ಹರ್ಟನ್ ಮತ್ತು ಹನಿ ನಾಯಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವು. ಸೆಂಟ್ ಬಾರ್ಲನ್ ವಿಭಾಗದಲ್ಲಿ 316 ನಾಯಿಗಳು ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement