ಕುತೂಹಲ ಕೆರಳಿಸಿದ ಸುಧಾಕರ್ ಕಾರ್ಯಕರ್ತರ ಸಭೆ
ಚಿಂತಾಮಣಿ: ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ ನೂರಾರು ಬೆಂಬಲಿಗರೊಂದಿಗೆ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆಗಳ ಬಗ್ಗೆ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಸೇರಲಾಗಿದ್ದ ಸಭೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬರೀ ಅಂತೆ, ಕಂತೆ: ನಗರದ ಮಾಳಪ್ಪಲ್ಲಿ ಅಂಜನಿ ನಿವಾಸದಲ್ಲಿ ಮಾಜಿ ಶಾಸಕ ಸುಧಾಕರ್ ನಗರಕ್ಕೆ ಆಗಮಿಸಿದಾಗ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಸಭೆ ಸೇರಿ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ವೈರಿಗಳನ್ನು ಸೋಲಿಸಲು ಅಥವಾ ಬೇರೆ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದೊಂದಿಗೆ ಸೇರುವುದೇ,ಇಲ್ಲವೇ ಸ್ವತಂತ್ರವಾಗಿ ಚುನಾವಣೆ ಅಭ್ಯರ್ಥಿ ಪರ ಕೆಲಸ ಮಾಡುವುದೇ ಎಂಬ ವಿಷಯವಾಗಿ ಮಾಜಿ ಶಾಸಕರ ಮುಂದೆ ಚರ್ಚಿಸಿದ್ದಾರೆಂದು ಅಂತೆ ಕಂತೆಗಳಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಒಂದು ಸುತ್ತು ಚರ್ಚೆ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಶಾಸಕರು, ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಇದ್ದು ಬುಧವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ್ದರು. ತಾಲ್ಲೂಕಿನ ವ್ಯಾಪ್ತಿಯ ಸುಧಾಕರ್ ಬೆಂಬಲಿತ ಮುಖಂಡರು ಹಾಗೂ ಕಾರ್ಯಕರ್ತರು ಅಂಜನಿ ನಿವಾಸಕ್ಕೆ ಭೇಟಿ ನೀಡಿ ಲೋಕಸಭೆ ಚುನಾವಣೆ ಎದುರಿಸಲು ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದು ಸುತ್ತು ಚರ್ಚಿಸಿದ್ದಾರೆ.
ಕುತೂಹಲ ಮೂಡಿಸಿದೆ: ವಿಧಾನಸಭೆ ಚುನಾವಣೆಯಲ್ಲಿ ಹಲವು ಮುಖಂಡರು ಜಾತಿ ರಾಜಕಾರಣ ಮಾಡಿ ಪರೋಕ್ಷವಾಗಿ ಜನರಿಗೆ ದಿಕ್ಕು ತಪ್ಪಿಸಿ, ತಪ್ಪು ಸಂದೇಶ ನೀಡಿದ ಪರಿಣಾಮ ಅಲ್ಪ ಮತಗಳಿಂದ ಸೋಲು ಕಂಡ ಮಾಜಿ ಶಾಸಕರು ಇಂದು ಹಲವು ಪ್ರಮುಖ ಮುಖಂಡರ ಜೊತೆ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ತಿರುಗೇಟು ನೀಡಲು ತಂತ್ರ?: ಶತಾಯ ಗತಾಯ ಲೋಕಸಭಾ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಭಲ್ಯವನ್ನು ಹೊಂದಿರುವ ಮಾಜಿ ಶಾಸಕ ಸುಧಾಕರ್ ಕುಟುಂಬದ ಮೇಲೆ ಇಂದಿಗೂ ರಾಜಕೀಯ ಮುಖಂಡರು ವಿಶ್ವಾಸವಿಟ್ಟು ಜನರಿಗೆ ಜಾತಿ ರಾಜಕಾರಣ ಮಾಡುತ್ತಾ ಕುತಂತ್ರದಿಂದ ಗುಂಪುಗಾರಿಕೆ ಮಾಡುತ್ತಿರುವ ಪ್ರಭಾವಿ ರಾಜಕಾರಣದ ಮುಖಂಡರಿಗೆ ತಿರುಗೇಟು ನೀಡಲು ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.