ಶಾಶ್ವತ ನೀರಾವರಿ, ಉದ್ಯೋಗ: ಕೇಶವ ಭರವಸೆ
ಕೋಲಾರ: ರಾಜ್ಯದ ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಮ್ಮ ಇಳಿ ವಯಸ್ಸಿನಲ್ಲೂ ಶ್ರಮಿಸುತ್ತಿರುವುದರಿಂದ ಸ್ಫೂರ್ತಿಗೊಂಡು ತಾನು ಜೆಡಿಎಸ್ ಸೇರಿರುವುದಾಗಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೇಶವ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯಕ್ಕೆ ತಾವು ಹಣ ಮಾಡಲು ಬಂದಿಲ್ಲ, ದೇವರು ನನಗೆ ಸಾಕಷ್ಟು ಆರ್ಥಿಕ ಶಕ್ತಿ ನೀಡಿದ್ದಾನೆ, ಜೆಡಿಎಸ್ ಮೂಲಕ ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದು ಮತದಾರ ಆಶೀರ್ವಾದ ಮಾಡಿದಲ್ಲಿ ಶಾಶ್ವತ ನೀರಾವರಿ ಸೌಲಭ್ಯದ ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದಾಗಿ ಭರವಸೆ ನೀಡಿದರು.
ಜೆಡಿಎಸಸ್ನಿಂದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿತ್ತು. ಆದರೆ,ಕೆಲವರು ಸಿದ್ದಯ್ಯನವರಿಗೆ ಭಯ ಹುಟ್ಟಿಸಿ ಸ್ಪರ್ಧಿಸದಂತೆ ಮಾಡಿದ್ದಾರೆ. ಅದೇ ರೀತಿ ತನ್ನನ್ನೂ ಸಹ ಕ್ಷೇತ್ರದಿಂದ ಓಡಿಸಲು ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಹೆದರಿ ಪಲಾಯನ ಮಾಡುವುದಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾವು ಮತ್ತು ಇತರರು ಸೇರಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದೇವೆ. ತಮ್ಮ ವಿರುದ್ಧ ಯಾವುದೇ ವ್ಯಕ್ತಿಕವಾದ ಕ್ರಿಮಿನಲ್ ಕೇಸುಗಳಿಲ್ಲ, ವ್ಯಾಪಾರದಲ್ಲಿನ ಅಸೂಹೆಯಿಂದಾಗಿ ಕೆಲವರು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ತಮ್ಮ ಬಳಿ ಇರುವ ದಾಖಲೆಗಳನ್ನು ಶೀಘ್ರವೇ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ,ಮಾಜಿ ಶಾಸಕ ಜಿ.ಕೆ. ವೆಂಕಟಶಿವರೆಡ್ಡಿ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಅಧಿಕಾರಕ್ಕೆ ಬರಲ್ಲ, ತೃತೀಯ ರಂಗ ಸರ್ಕಾರ ರಚನೆ ಮಾಡುತ್ತದೆ ಎಂದರು.
ಕೋಲಾರ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ, ಜೆಡಿಎಸ್ಸಿಂದ ಯುವಕ ಕೇಶವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಸಾಮಾಜಿಕ ಕಳಕಳಿ ಇರುವ ಕೇಶವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರನ್ನು ತೋಡಗಿಸಿಕೊಳ್ಳುವುದಾಗಿ ಹೇಳಿದರು.
ಯಾವ ಮಾನದಂಡದ ಆಧಾರದ ಮೇಲೆ ಕೇಶವ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ, ಸ್ಥಳೀಯರಿಗೆ ಏಕೆ ಅವಕಾಶ ನೀಡಲಿಲ್ಲ, ಆಕಾಂಕ್ಷಿಗಳಾಗಿದ್ದ ಮೈಲಾರಪ್ಪ, ಬಿ.ಪಿ. ವೆಂಕಟಮುನಿಯಪ್ಪನವರಿಗೆ ಸ್ಪರ್ಧಿಸಲು ಆರ್ಹತೆ ಇರಲಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ವೇದಿಕೆಯಲ್ಲಿದ್ದ ಮುಖಂಡರು ತಿಣುಕಾಡಿದರು. ಈ ಹಿಂದೆ ತಾವು ರೀಯಲ್ ಎಸ್ಟೇಟ್ ಮಾಲೀಕರು ರಾಜಕೀಯಕ್ಕೆ ಬಂದು ವ್ಯವಸ್ಥೆ ಹಾಳು ಮಾಡಿದ್ದಾರೆಂದು ಆರೋಪಿಸಿದ್ದೀರಿ. ಈಗ ತಮ್ಮ ಪಕ್ಷವೂ ರಿಯಲ್ ಎಸ್ಟೇಟ್ ಮಾಲೀಕ ಕೇಶವ ಅವರಿಗೆ ಟಿಕೆಟ್ ನೀಡಿದೆಯಲ್ಲವೆಂದು ಮಾಜಿ ಸಚಿವ ಕೆ. ಶ್ರೀನಿವಾಸಗೌಡರನ್ನು ಕೇಳಿದಾಗ, ರೀಯಲ್ ಎಸ್ಟೇಟ್ ವ್ಯಾಪಾರಿಗಳಲ್ಲಿ ಕೇಶವ ಕೊಂಚ ಮಟ್ಟಿಗೆ ನಿಯತ್ತಾಗಿದ್ದಾರೆಂದು ಸಮರ್ಥನೆ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಮಾತನಾಡದೆ ಅಚ್ಚರಿ ಮೂಡಿಸಿದರೆ, ಮಾಲೂರು ಶಾಸಕ ಮಂಜುನಾಥ್ಗೌಡ ಅವರು ಮಾತ್ರ, ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಗರಣಗಳಲ್ಲಿ ಮುಳುಗಿದೆ, ಕೇಶವ ಅಂತಹವರನ್ನು ಗೆಲ್ಲಿಸುವ ಮೂಲಕ ಬದಲಾವಣೆ ತರಲು ಮತದಾರರ ಸಹಕಾರ ಮುಖ್ಯವೆಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಮಂಜುನಾಥಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ನಗರಸಭೆ ಅಧ್ಯಕ್ಷ ಮುಬಾರಕ್, ಕೆಜಿಎಫ್ ನಗರಸಭೆ ಅಧ್ಯಕ್ಷ ಭಕ್ತವತ್ಸಲಂ, ಜಿ.ಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಆಲಂಗೂರು ಶಿವಣ್ಣ,ಇಬ್ರತ್ ಉಲ್ಲಾ ಖಾನ್ ಮತ್ತಿತರರು ಇದ್ದರು.