ಜಾಲರಿ ಕಾಯ್ದಿರಿಸುವಿಕೆ ವಿರೋಧಿಸಿ ಪ್ರತಿಭಟನೆ
ಶಿಡ್ಲಘಟ್ಟ: ರೇಷ್ಮೆಗೂಡು ಜಾಲರಿ ಕಾಯ್ದಿರಿಸುವುದನ್ನು ವಿರೋಧಿಸಿ ಬೆಳೆಗಾರರು ತಮ್ಮ ಗೂಡನ್ನು ರಸ್ತೆಗೆ ಬಿಸಾಡಿ ಪ್ರತಿಭಟನೆ ನಡೆಸಿದರು. ಇದರಿಂದ ರೈತರ ಎರಡು ಗುಂಪುಗಳ ನಡುವೆ ಮಾತಿನ ಚಕಮುಕಿ ನಡೆದು ಪರಿಸ್ಥಿತಿ ಬಿಗಡಾಯಿಸಿತಾದರೂ ಅಕ್ಕಪಕ್ಕದ ರೈತರು ಸೇರಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.
ಪಟ್ಟಣದ ಸರಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಗುರುವಾರ ರಾತ್ರಿ ಆಗಮಿಸಿದ್ದ ಆಂಧ್ರದ ಕಡಪ ಜಿಲ್ಲೆಯ ಪೆದ್ದನ್ನ ಇನ್ನಿತರರು ಮಾರುಕಟ್ಟೆಯ 3ನೇ ಗೋದಾಮಿನಲ್ಲಿ ಖಾಲಿಯಾಗಿದ್ದ ಜಾಲರಿಗಳಲ್ಲಿ ಗೂಡನ್ನು ತುಂಬಿದ್ದಾರೆ.
ಆದರೆ ಬೆಳಗ್ಗೆ ಮಾರುಕಟ್ಟೆಗೆ ಆಗಮಿಸಿದ ಸ್ಥಳೀಯ ರೈತರು ಈ ಜಾಲರಿಯನ್ನು ನಾವು ಕಾಯ್ದಿರಿಸಿದ್ದು ಇದರಲ್ಲಿ ಹಾಕಿರುವ ಗೂಡನ್ನು ತೆಗೆಯಿರಿ. ನಮ್ಮ ಗೂಡನ್ನು ಹಾಕಿಕೊಳ್ಳುತ್ತೇವೆ ಎಂದು ತಗಾದೆ ತೆಗೆದಿದ್ದಾರೆ. ಆಗ ಇವರನಡುವೆ ಮಾತಿನ ಚಕಮುಕಿ ನಡೆದಿದೆ.
ಮಾರುಕಟ್ಟೆಯಲ್ಲಿ ಜಾಲರಿಗಳನ್ನು ಕಾಯ್ದಿರಿಸುವಂತಿಲ್ಲ. ಹಾಗಾಗಿ ನಾವು ಹಾಕಿದ ಗೂಡನ್ನು ತೆಗೆಯೋದಿಲ್ಲ ಎಂದು ಆಂಧ್ರದ ರೈತರು ಪಟ್ಟು ಹಿಡಿದರೆ ಅದೆಲ್ಲಾ ಆಗೊಲ್ಲ. ನಾವು ನಿನ್ನೆಯೆ ಈ ಜಾಲರಿಗಳಲ್ಲಿ ಒಂದಷ್ಟು ಗೂಡನ್ನು ಹಾಕಿ ಕಾಯ್ದಿರಿಸಿದ್ದೇವೆ. ಹಾಗಾಗಿ ನೀವು ಬಿಡಲೇಬೇಕೆಂದು ಸ್ಥಳೀಯ ರೈತರು ಪಟ್ಟು ಹಿಡಿದಿದ್ದಾರೆ.
ಇಬ್ಬರೂ ರೈತರು ಮೊಂಡು ಹಿಡಿದು ಕುಳಿತಾಗ ಇಬ್ಬರೂ ರೈತರ ಪರವಾಗಿ ಇನ್ನೊಂದಷ್ಟು ರೈತರು ಜತೆಗೂಡಿದ್ದಾರೆ. ಮೊದಲಿಗೆ ಇಬ್ಬರು ರೈತರ ನಡುವೆ ಮಾತ್ರವೇ ನಡೆಯುತ್ತಿದ್ದ ವಾಗ್ವಾದ ಎರಡು ಗುಂಪುಗಳಿಗೆ ಹರಡಿದೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಕೊನೆಗೂ ಸ್ಥಳೀಯ ರೈತರೇ ಮೇಲುಗೈ ಸಾಧಿಸಿ ಆಂಧ್ರದ ರೈತರ ಗೂಡನ್ನು ಜಾಲರಿಯಿಂದ ಹೊರ ಹಾಕಿದ್ದಾರೆ. ಇದರಿಂದ ಬೇಸತ್ತ ಆಂಧ್ರದ ಇಬ್ಬರು ಮೂವರು ರೈತರು ತಮ್ಮ ಗೂಡನ್ನು ಮಾರುಕಟ್ಟೆ ಆವರಣಕ್ಕೆ ತಂದು ರಸ್ತೆಯಲ್ಲಿ ಬಿಸಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಮಾರುಕಟ್ಟೆಯಲ್ಲಿ ಸ್ಥಳೀಯ ರೈತರಿಗೆ ಮಾತ್ರವೇ ಪ್ರಾಶಸ್ತ್ಯ ನೀಡಲಾಗುತ್ತಿದ್ದು ಹೊರಗಿನಿಂದ ಬರುವ ರೇಷ್ಮೆ ಬೆಳೆಗಾರರನ್ನು ಕೇಳುವವರು ಯಾರೂ ಇಲ್ಲವೇ ನಮ್ಮ ಕಷ್ಟ ಸುಖವನ್ನು ಹಂಚಿಕೊಳ್ಳಲು ಇಲ್ಲಿ ಅವಕಾಶ ಇಲ್ಲವೇ ಎಂದು ಪ್ರಶ್ನಿಸಿದರು. ಸ್ಥಳೀಯ ರೈತರು ಮಾತ್ರ ಕಮೀಷನ್ ನೀಡ್ತಾರೇನು, ನಾವು ನೀಡೊಲ್ಲವೆ. ಇಲ್ಲಿನ ರೈತರಿಗೆ ಮಾತ್ರವೇ ಈ ಮಾರುಕಟ್ಟೆ ಕಟ್ಟಿದಂತಿದೆ. ಈ ಮಾರುಕಟ್ಟೆಯ ಮೇಲೆ ಸ್ಥಳೀಯರಿಗೆ ಮಾತ್ರ ಪ್ರವೇಶ, ಹೊರಗಿನವರಿಗೆ ಪ್ರವೇಶವಿಲ್ಲ ಅಂತ ದೊಡ್ಡದಾಗಿ ಬೋರ್ಡ್ ಬರೆಸಿ ಬಿಡಿ ನಾವು ಬರೊಲ್ಲ ಎಂದು ತಮ್ಮ ಗೋಳನ್ನು ತೋಡಿಕೊಂಡರು. ಕೊನೆಗೆ ಅಲ್ಲಿದ್ದ ಕೆಲ ರೈತರು ಆಂಧ್ರದ ರೈತರನ್ನು ಸಮಾಧಾನಪಡಿಸಿ ನಾವು ನಿಮಗೆ ಜಾಲರಿ ಕೊಡುತ್ತೇವೆ ಬನ್ನಿ. ಆಗಿದ್ದು ಆಗಿದೆ. ಯಾವಾಗಲೂ ಈ ರೀತಿ ನಡೆಯಲ್ಲ. ಏನೋ ವಿಷ ಘಳಿಗೆ ನಡೆಯ ಬಾರದಿತ್ತು ನಡೆದಿದೆ ಎಂದು ಸಮಾಧಾನ ಪಡಿಸಿದ ನಂತರ ಪರಿಸ್ಥಿತಿ ತಿಳಿಯಾಯ್ತು.
ಬೆಳಗ್ಗೆ 10.30ರ ಬದಲಿಗೆ 11.30ಕ್ಕೆ ಇಲ್ಲವೆ 12 ಗಂಟೆಗೆ ಹರಾಜು ನಡೆಯುವುದರಿಂದ ದೂರದ ಊರುಗಳಿಂದ ಬರುವ ರೈತರು ಆ ಸಮಯಕ್ಕೆ ಸರಿಯಾಗಿ ಗೂಡನ್ನು ಈ ಮಾರುಕಟ್ಟೆಗೆ ತರಬಹುದು. ರಾತ್ರಿಯೆ ಗೂಡನ್ನು ತಂದು ಉಳಿದುಕೊಳ್ಳುವುದಕ್ಕೆ ಬ್ರೇಕ್ ಹಾಕಿದಾಗ ಮಾತ್ರ ಈ ಜಾಲರಿಗಳ ಕಾಯ್ದಿರಿಸುವುದನ್ನು ನಿಷೇಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಈ ನಿಟ್ಟಿನಲ್ಲಿ ಮಾರುಕಟ್ಟೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಜಾಲರಿ ಕಾಯ್ದಿರಿಸುವಿಕೆಗುದ್ದಾಟಕ್ಕೆ ತಡೆ ಹಾಕಬಹುದು.