ಬೆಸ್ಕಾಂ ನಿರ್ಲಕ್ಷ್ಯ: ರೈತನಿಗೆ ವಿದ್ಯುತ್ ಸ್ಪರ್ಶ
ಮುಳಬಾಗಲು: ತಾಲೂಕಿನ ಮಂಚಿಗಾನಹಳ್ಳಿ ಗ್ರಾಮದ ರೈತನೊಬ್ಬ ತನ್ನ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆಯಲ್ಲಿ ಬೆಸ್ಕಾಂ ನಿರ್ಲಕ್ಷ್ಯದಿಂದ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಗಾಯಳುವನ್ನು ಕೋಲಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದೇ ವೇಳೆ ಬೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಮಂಚಿಗಾನಹಳ್ಳಿ ಗ್ರಾಮಸ್ಥರು ಸಂಜೆ ಬೆಸ್ಕಾಂ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸುಳಿವು ಅರಿತ ಬೆಸ್ಕಾಂ ಕಚೇರಿಸಿಬ್ಬಂದಿ ಕಚೇರಿಗೆ ಬೀಗ ಜಡಿದು ಪರಾರಿಯಾದರು.
ಗಾಯಾಳವನ್ನು ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಸಿಬ್ಬಂದಿ ಪ್ರಧಮ ಚಿಕಿತ್ಸೆ ನೀಡಲು ಸಹ ಹಾಜರಿರಲಿಲ್ಲವೆಂದು ಮುಖಂಡ ಮಂಚಿಗಾನಹಳ್ಳಿ ಚಂದ್ರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಕೊತ್ಮರಿ ಮಂಜುನಾಥ್ ತಾಲೂಕು ಅಧ್ಯಕ್ಷ ಜಯರಾಮೇಗೌಡ, ಸೊನ್ನವಾಡಿ ಮುನಿರಾಜು, ಚಂದ್ರಕುಮಾರ್ ಸೇರಿದಂತೆ ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.