ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶ
ಚಿಂತಾಮಣಿ: ಕೇಂದ್ರ ಸಚಿವ ಮುನಿಯಪ್ಪ ಮಾತು ನಂಬದೆ ಜೆಡಿಎಸ್ ಯುವ ಅಭ್ಯರ್ಥಿ ಕೋಲಾರ ಕೇಶವ್ರನ್ನು ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮಾಲೂರು ಶಾಸಕ ಮಂಜುನಾಥಗೌಡ ಹೇಳಿದರು. ತಾಲೂಕಿನ ಮಾಡಿಕೆರೆ ಕ್ರಾಸ್ನಲ್ಲಿ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಜೆಡಿಎಸ್ ಹೈಕಮಾಂಡ್ ತೀರ್ಮಾನದಂತೆ ಕೇಶವ್ರನ್ನು ಕಣಕ್ಕಿಳಿಸಿರುವುದಾಗಿ ಮಂಜುನಾಥಗೌಡ ತಿಳಿಸಿದರು. ಮಾಲೂರು ತಾ. ಮಂಗಸಂದ್ರದ ಕೇಶವ್ ಭೋವಿ ಸಮುದಾಯಕ್ಕೆ ಸೇರಿದ್ದು, ಉನ್ನತ ವಿದ್ಯಾಭ್ಯಾಸ ಮಾಡಿ ಉದ್ಯಮಿಯಾಗಿ ಸಮಾಜದಲ್ಲಿ ಒಳ್ಳೆ ಕೆಲಸ ಮಾಡಲು ಬಂದಿರುವುದಾಗಿ ಹೇಳಿದರು.
ಚಿಂತಾಮಣಿ ಕ್ಷೇತ್ರದ ಬಟ್ಲಹಳ್ಳಿಯಲ್ಲಿ ಹೋಬಳಿ ಸಮಾವೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹಿಳಾ ಅಧ್ಯಕ್ಷೆ ಕೆ.ಆರ್.ರಾಜೇಶ್ವರಿ ಮತ್ತು ಆಯಿಷಾಸುಲ್ತಾನ್, ಅರುಣಬಾಬು,ಶಂಕರಪ್ಪ,ಕನ್ನಡ ಅಶ್ವಥ್,ಪೆದ್ದೂರು ನಾಗರಾಜರೆಡ್ಡಿ ಇದ್ದರು.
ಕೇಶವ ವಿರುದ್ಧ ಜೆಡಿಎಸ್ ಬಲಗೈ ಸಮುದಾಯ ಕಿಡಿ
ಕೋಲಾರ: ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ರೀಯಲ್ ಎಸ್ಟೆಟ್ ಉದ್ಯಮಿ ಕೇಶವ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಜೆಡಿಎಸ್ ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಮುಖಂಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ದೂರು ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಅಕಾಂಕ್ಷಿಗಳಾಗಿದ್ದ ಪ್ರೊ.ಮೈಲಾರಪ್ಪ, ಜಿಪಂ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್, ಮುನಿಆಂಜನಪ್ಪ, ಜಿಪಂ ಮಾಜಿ ಸದಸ್ಯ ರಾಮಚಂದ್ರ ಇನ್ನಿತರರು ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ಸೇರಿ ಕೇಶವ ಅವರಿಗೆ ಟಿಕೆಟ್ ನೀಡಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ,ರಾತ್ರಿ ದೇವೇಗೌಡರ ನಿವಾಸಕ್ಕೆ ತೆರಳಿ ಕೇಶವ ಅವರಿಗೆ ಬಿ.ಫಾರಂ ನೀಡಿದಲ್ಲಿ ಪಕ್ಷ ತೊರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಕೆಲ ಜೆಡಿಎಸ್ ಮುಖಂಡರು ಕೇಶವ ಅವರಿಗೆ ಟಿಕೆಟ್ ಮಾರಿಕೊಂಡಿದ್ದಾರೆ. ಇದರಿಂದ ನಿಷ್ಠರಿಗೆ ನೋವುಂಟಾಗಿದೆ. ಬಲಗೈ ಸಮುದಾಯಕ್ಕೆ ಸೇರಿದವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಇದಕ್ಕೆ ದೇವೇಗೌಡರು ಯಾವುದೇ ಪ್ರತಿಕ್ರಿಯೆ ನೀಡದೆ, ಸಮಸ್ಯೆಯನ್ನು ನಿವಾರಣೆ ಮಾಡುವುದರಿಂದ ವಿವಾದಕ್ಕೆ ಅವಕಾಶ ನೀಡದಂತೆ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಆಯುಧ ಒಪ್ಪಿಸಲು ಸೂಚನೆ
ಕೋಲಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಆಯುಧ ಪರವಾನಗಿದಾರರು ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ಶಸ್ತ್ರಾಸ್ತ್ರಗಳನ್ನು ಒಯ್ಯುವುದನ್ನು ಹಾಗೂ ಅವುಗಳ ಬಳಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಡಿ.ಕೆ. ರವಿ ಆದೇಶ ಹೊರಡಿಸಿದ್ದಾರೆ. ಬಂದೂಕು, ರೈಫಲ್ಗಳ ಪರವಾನಗಿದಾರರು ಸಮೀಪದ ಪೊಲೀಸ್ ಠಾಣೆಯಲ್ಲಾಗಲೀ ಅಥವಾ ಪರವಾನಗಿ ಹೊಂದಿರುವ ಆರ್ಮರಿಗಳಲ್ಲಿ ಆಯುಧಗಳನ್ನು ಠೇವಣಿ ಇಡಲು ಸೂಚಿಸಿದೆ. ಸರ್ಕಾರಿ ಸಿಬ್ಬಂದಿಯ ಕಾರ್ಯನಿರ್ವಹಣಾ ವೇಳೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ. ಗಡಿಭಾಗ ಪ್ರದೇಶಗಳಲ್ಲಿ ಆತ್ಮರಕ್ಷಣೆಗಾಗಿ ಆಯುಧ ಅಗತ್ಯದ ಅನಿವಾರ್ಯತೆ ಇದ್ದಲ್ಲಿ, ಸಂಬಂಧಿತ ಕ್ಷೇತ್ರ ವ್ಯಾಪ್ತಿ ಉಪನಿರೀಕ್ಷಕರಿಂದ ಅನುಮತಿ ಪಡೆಯಬಹುದು.
ಲೋಕಸಭಾ ಚುನಾವಣೆಗಾಗಿ ಕಾನೂನು ಸೆಲ್ ಸ್ಥಾಪನೆ
ಕೋಲಾರ: ಚುನಾವಣೆ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೆಲ್ ಸ್ಥಾಪನೆ ಮಾಡಲಾಗಿದ್ದು ಇದಕ್ಕೆ ನೋಡಲ್ ಅಧಿಕಾರಿಗಳಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ಕುಮಾರ್ ರಾಜು ನೇಮಕ ಮಾಡಲಾಗಿದೆ.ಜಿಲ್ಲಾಧಿಕಾರಿ ಡಿ.ಕೆ. ರವಿ ಆದೇಶ ಹೊರಡಿಸಿದ್ದು ಕಾನೂನು ಸೆಲ್ ಸದಸ್ಯರಾಗಿ ಸರ್ಕಾರಿ ಕಾನೂನು ಕಾಲೇಜಿನ ಉಪನ್ಯಾಸಕ ಹೆಚ್.ಎಂ. ಸುಮಂತ್ರನ್ನು ನೇಮಕ ಮಾಡಲಾಗಿದೆ. ನೋಡಲ್ ಅಧಿಕಾರಿ ದೂರವಾಣಿ ಸಂಖ್ಯೆ 9686063298, ಕಾನೂನು ಸೆಲ್ ಸದಸ್ಯರ ದೂರವಾಣಿ ಸಂಖ್ಯೆ 9902957461 ಸಂಪರ್ಕಿಸಬಹುದಾಗಿದೆ.
ವೈಭವದ ನಾಗನಾಥೇಶ್ವರ ಬ್ರಹ್ಮರಥೋತ್ಸವ
ಚಿಂತಾಮಣಿ: ಚಿಂತಾಮಣಿ ನಗರದ ಪ್ರಸಿದ್ಧ ಶ್ರೀ ನಾಗನಾಥೇಶ್ವರ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
ನಗರದ ಪುರಾಣ ಪ್ರಸಿದ್ಧ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಬುಧವಾರ ಮಧ್ಯಾಹ್ನ ನಾಗನಾಥೇಶ್ವರ ದೇವರ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತಾಧಿಗಳು ರಥವನ್ನು ಎಳೆಯುವ ಮೂಲಕ ಚಾಲನೆ ನೀಡದರು. ಈ ಸಂದರ್ಭದಲ್ಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ನಾಗನಾಥೇಶ್ವರ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥೋತ್ಸವದ ಉತ್ಸವ ಮೂರ್ತಿಯನ್ನು ಹೊತ್ತು ಪ್ರದರ್ಶನ ಮಾಡಿದರು.
ಬ್ರಹ್ಮರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ, ಗಿರಿಜ ಕಲ್ಯಾಣೋತ್ಸವ,ಹಸರುಬೇಳೆ, ಪಾನಕ ಮತ್ತು ಅನ್ನ ಸಂತರ್ಪಣೆ ಸಾವಿರಾರು ಭಕ್ತಾದಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸಸ್ಸಿಬ್ಬಂದಿಯನ್ನು ನೇಮಿಸಿ ಬಂದೋಬಸ್ ಕಲ್ಪಿಸಲಾಗಿತ್ತು.
ವಕೀಲ ಸೇರಿ ಮೂವರ ವಿರುದ್ಧ ಕೇಸು ದಾಖಲು
ಕೋಲಾರ: ನಗರದ ಹೊರವಲಯದ ಡಿಹೆಚ್ಓ ಕಚೇರಿಯ ಸಮೀಪದ ಪಾಳು ಕಟ್ಟಡದಲ್ಲಿ ಇತ್ತೀಚೆಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಕಡೆಯವರು ನೀಡಿದ ದೂರಿನ ಮೇರೆಗೆ ಹಿರಿಯ ವಕೀಲ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಕೇಸು ದಾಖಲು ಮಾಡಿಕೊಂಡಿದ್ದಾರೆ. ನಗರದ ಹವೇಲಿ ಮೊಹಲ್ಲಾದ ವಾಸಿ ಕೃಷ್ಣಸಿಂಗ್ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದ, ಶವ ಕೊಳೆತು ಹೋಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಯುವಕನ ಬಳಿ ದೊರೆತ ಡೆತ್ನೋಟಲ್ಲಿ ಹಿರಿಯ ವಕೀಲ ಮಹ್ಮದ್ ಹನೀಫ್, ಇವರ ಸಹವರ್ತಿಗಳಾದ ಕಮಲ್ಪಾಷ ಮತ್ತು ಶಾಹಿನ್ (ತಾಜ್ಜ್ಲಾಲಾ) ಸೇರಿದಂತೆ ಇತರರು ನೀಡಿದ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆಯಲಾಗಿತ್ತು. ಆರೋಪಕ್ಕೆ ಒಳಗಾಗಿರುವ ವಕೀಲ ಮಹ್ಮದ್ ಹನೀಫ್ ಅವರು ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದು ಇತರೆ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಮೃತ ಯುವಕನ ತಾಯಿ ಕಲಾವತಿ ಬಾಯಿ ಮತ್ತು ಅಕ್ಕ ಕವಿತಾ ಬಾಯಿ ಅವರ ಹೇಳಿಕೆ ಹಾಗೂ ದೂರಿನ ಅನ್ವಯ ನಗರಠಾಣೆಯ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ.
ಮುಳಬಾಗಿಲುಪುರಸಭೆ ಅಧಿಕಾರಿ ವಿರುದ್ಧ ಡಿಸಿ ಗರಂ
ಕೋಲಾರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಮಟ್ಟದ ಸಭೆಗೆ ಮುಳಬಾಗಿಲು ಪುರಸಭೆ ಮುಖ್ಯಾಧಿಕಾರಿ ತಮ್ಮ ಬದಲಿಗೆ ಸಹಾಯಕ ಅಧಿಕಾರಿಯನ್ನು ಸಭೆ ಕಳುಹಿಸಿ ಜಿಲ್ಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆಯಿತು. ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿರುವಾಗ ಮುಳಬಾಗಿಲು ಪುರಸಭೆ ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿರದೆ ತಮ್ಮನ್ನು ಕಳುಹಿಸುವ ಮೂಲಕ ಕರ್ತವ್ಯ ನಿರ್ಲಕ್ಷಿಸಿದ್ದಾರೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಮುಖ್ಯಾಧಿಕಾರಿ ವಿರುದ್ಧ ಗುಡುಗಿದರು.
ಸಭೆಗೆ ಸಹಾಯಕ ಅಧಿಕಾರಿಯನ್ನು ಕಳುಹಿಸಲು ಅವರಿಗೆಷ್ಟು ಧೈರ್ಯ, ಸಭೆ ಮುಗಿಯುವ ಒಳಗಾಗಿ ಅವರು ಹಾಜರಾಗದಿದ್ದಲ್ಲಿ ವಾರೆಂಟ್ ನೀಡಿ ಪೊಲೀಸರ ಮೂಲಕ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪರಿಸ್ಥಿತಿ ಅರಿತ ಸಹಾಯ ಅಧಿಕಾರಿ ತನ್ನ ಮೇಲಾಧಿಕಾರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ ಕೆಲವೇ ನಿಮಿಷಗಳ ಪುರಸಭೆ ಮುಖ್ಯಾಧಿಕಾರಿ ಸಭೆಗೆ ಹಾಜರಾಗಿ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡರು.