ಆಮ್ ಆದ್ಮಿ ನೇತಾರನ ಮಿಂಚಿನ ಸಂಚಾರ
ಚಿಕ್ಕಬಳ್ಳಾಪುರ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೊದಲ ಬಾರಿಗೆ ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ಕೇವಲ ಅರ್ಧಗಂಟೆಯಲ್ಲಿಯೇ ಮಿಂಚಿನ ರ್ಯಾಲಿ ನಡೆಸಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.
ರ್ಯಾಲಿಯಿಂದ ತೀವ್ರವಾಗಿ ದಣಿದಿದ್ದ ಅವರು ಹಿಂದಿ ಭಾಷೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿರನ್ನು ಟೀಕಿಸಿದರು.
ಅರವಿಂದ ಕೇಜ್ರಿವಾಲ್ ಪ್ರಚಾರ ರ್ಯಾಲಿ ಭಾನುವಾರ ನಗರದ ಶಾಂತಿಸಾಗರ ಹೋಟೆಲ್ ನಿಂದ ಚಾಲನೆ ಪಡೆದುಕೊಂಡು, ಬಜಾರ್ ರಸ್ತೆಯಲ್ಲಿ ಅಂತ್ಯಗೊಂಡಿತು. ಆಮ್ ಆದ್ಮಿ ಪಕ್ಷದ 20 ಕ್ಕೂ ಹೆಚ್ಚು ಮುಖಂಡರು ರ್ಯಾಲಿಯಲ್ಲಿ ಭಾಗವಹಿಸಿದ್ದರೆ, ರಕ್ಷಣೆಗಾಗಿ ಸುಮಾರು 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು.
ಎಲ್ಲಾ ಸುಳ್ಳು ಪ್ರಚಾರ: ನಗರದ ಭುವನೇಶ್ವರಿ ವೃತ್ತದಲ್ಲಿ ಮಾತನಾಡಿದ ಅರವಿಂದ್ರ ಕೇಜ್ರಿವಾಲ್, ಗುಜರಾತ್ ಸರ್ವಾಂಗೀಣ ಅಭಿವೃದ್ಧಿ ಹೊಂದಿದ ರಾಜ್ಯ ಎಂದೆಲ್ಲಾ ಸುಳ್ಳು ಪ್ರಚಾರ ಮಾಡುತ್ತ ನರೇಂದ್ರ ಮೋದಿ ಎಲ್ಲರನ್ನೂ ಮೋಸ ಮಾಡುತ್ತಿದ್ದಾರೆ. ಗುಜರಾತಿನಲ್ಲಿ 800 ಮಂದಿ ರೈತರು ಆತ್ಮಹತ್ಮೆ ಮಾಡಿಕೊಂಡಿದ್ದರೂ ಜನರಿಗೆ ತಿಳಿಸುವ ಕೆಲಸವಾಗುತ್ತಿಲ್ಲ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಕೇಂದ್ರದಲ್ಲಿ ಪ್ರಭಾವಿ ಸಚಿವರಾದರೂ ಈ ಭಾಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ. ಅಂಬಾನಿ ಜೊತೆಗೆ ಹೊಂದಾಣಿಕೆಯಲ್ಲಿ ಅವರಿಗೆ ಅನುಕೂಲ ಮಾಡಿಕೊಟ್ಟು ದೇಶಕ್ಕೆ ಕೋಟ್ಯಂತರ ರು. ನಷ್ಟವನ್ನುಂಟು ಮಾಡಿದ್ದಾರೆ. ಇಂತಹವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ದೇಶದ ಜನರಿಗೆ ನಷ್ಟವಾಗುತ್ತದೆ. ಇದನ್ನು ಜನ ಸಾಮಾನ್ಯರು ಅರಿಯಬೇಕೆಂದರು.
ಜನರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲವನ್ನು ನೀಡಿ ಜನಪರ ಸರ್ಕಾರ ರಚನೆಗೆ ಮುಂದಾಗಬೇಕು. ಈಗಾಗಲೇ ದೆಹಲಿಯಲ್ಲಿ ಕ್ರಾಂತಿಯಾಗಿದ್ದು ಇನ್ನೂ ಎಲ್ಲೆಡೆ ಬಡವರ ಶಕ್ತಿಯನ್ನು ತೋರಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆರ್ಕೇಶ್ ಇದ್ದರು.
ಪೊರಕೆ ತೋರಿಸೋದೇಕೆ: ಕ್ಷಿಪ್ರ ಬೆಳವಣಿಗೆಯಲ್ಲಿ ಜನರ ಗಮನ ಸೆಳೆದು ದೆಹಲಿಯಲ್ಲಿ ಅಧಿಕಾರ ಹಿಡಿದು ಪೊರಕೆಯಲ್ಲಿ ವಿಜಯೋತ್ಸವ ಆಚರಿಸಿದ ಆಮ್ ಅದ್ಮಿಯ ರ್ಯಾಲಿಯಲ್ಲಿ ಪೊರಕೆ ಎತ್ತಿ ಹಿಡಿಯಲಾಯಿತು.
ಆದರೆ, ತೆರೆದ ವಾಹನದಲ್ಲಿ ಮೆರವಣಿಗೆ ಹೊರಡುತ್ತಿದ್ದ ಸಂದರ್ಭದಲ್ಲಿ ತಮ್ಮ ಕಡೆಗೆ ಅಲ್ಲಾಡಿಸುತ್ತ ಪೊರಕೆ ತೋರಿಸುವುದನ್ನು ತಿಳಿಯದ ಅನೇಕ ಜನರು ಕುತೂಹಲದಿಂದ ಪ್ರಶ್ನಿಸಿಕೊಂಡರು. ಆಮ್ ಆದ್ಮಿ ಪಕ್ಷದ ಮೊದಲ ರ್ಯಾಲಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊರಕೆಯ ಕತೆ ಏನು ಎಂದು ಮಾತನಾಡಿಕೊಂಡರು. ಆಮ್ ಆದ್ಮಿ ಪಕ್ಷದ ಮುಖಂಡರು ಭ್ರಷ್ಟಾಚಾರ ಸಾಕು, ದೇಶ ಅಭಿವೃದ್ಧಿಯಾಗಬೇಕು, ಭ್ರಷ್ಟಾಚಾರಿಗಳೇ ತೊಲಗಿ ಎಂದು ಘೋಷಣೆ ಕೂಗಿದರು.
ಭ್ರಷ್ಟಾಚಾರ ನಿರ್ಮೂಲನೆಯೇ ಗುರಿ
ಗೌರಿಬಿದನೂರು: ಆಮ್ಆದ್ಮಿ ಪಕ್ಷಕ್ಕೆ ಅಧಿಕಾರಕ್ಕಿಂತ ಭ್ರಷ್ಟಾಚಾರ ನಿರ್ಮೂಲನೆಯೇ ಮೂಲ ಉದ್ದೇಶ ಎಂದು ಕೋಲಾರ ಜಿಲ್ಲಾ ಮೀಸಲು ಕ್ಷೇತ್ರದ ಅಭ್ಯರ್ಥಿ ಹಾಗೂ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ವಿದುರಾಶ್ವತ್ಥದಿಂದ ಚುನಾವಣಾ ಪಾದ ಯಾತ್ರೆಯಲ್ಲಿ ಭಾಗವಹಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ದಿವಾಳಿಯತ್ತ ಕೊಂಡೊಯ್ದಿದಾರೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸುಳ್ಳುಗಾರನಾಗಿದ್ದು ಈ ಕ್ಷೇತ್ರ ಮತ್ತು ರಾಜ್ಯಕ್ಕೆ ತೀರದ ಮೋಸಮಾಡಿದ್ದಾರೆ. ಬಂಡವಾಳ ಶಾಹಿಗಳೊಂದಿಗೆ ಕೈ ಜೋಡಿಸಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ ಕೀರ್ತಿ ಮೊಯ್ಲಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.
ಮತ್ತೊಬ್ಬ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ನೋಟಿನ ರಾಜಕಾರಣ ಮಾಡಿ ದಲಿತರಿಗೆ ಅನ್ಯಾಯ ಎಸಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಭೂಗಳ್ಳನಾಗಿದ್ದು ಸ್ವ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಿಂಜರಿದು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿರುವುದು ಅವರ ಕುತಂತ್ರ ರಾಜಕಾರಣ ಎಂದು ಲೇವಡಿ ಮಾಡಿದರು.
ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಬೇರ್ಪಡಿಸಿರುವುದು ಜಾತಿ ರಾಜಕಾರಣಕ್ಕೆ ಎಂದು ತಿಳಿಸಿದರು. ದೇಶದ ಯುವ ಜನತೆ ಭ್ರಷ್ಟಾಚಾರ ಮುಕ್ತ ದೇಶವನ್ನು ಮಾಡಲು ಆಮ್ಆದ್ಮಿ ಪಕ್ಷ ಬೆಂಬಲಿಸಬೇಕೆಂದು ಮನವಿ ಮಾಡಿದರು. ಜಾಥಾದಲ್ಲಿ ವೆಂಕಟರಮಣ, ದುರ್ಗಮ್ಮ, ವೆಂಕಟೇಶ್, ಜಲ ತಜ್ಞ ಕೆ. ನಾರಾಯಣಸ್ವಾಮಿ, ಪಿ. ನರಸಿಂಹಮೂರ್ತಿ, ಮೋಹಿತ್ ಭಾಗವಹಿಸಿದ್ದರು.