'ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಿ'
ಬಂಗಾರಪೇಟೆ: ಮಕ್ಕಳಲ್ಲಿ ದೇಶ ಕಟ್ಟುವ ಕೆಲಸ ಕಲಿಸಿದರೆ ಮುಂದೆ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವೆಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ತಾಲೂಕಿನ ಕಳ್ಳಿಕುಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರಿದ್ದು, ಅವರನ್ನು ಪೋಷಕರು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡುವುದರ ಮುಖಾಂತರ ಶಾಲೆಗಳ ಅಭಿವೃದ್ಧಿಯ ಜೊತೆಗೆ ಪಾಲಕರ ಕುಟುಂಬಗಳು ಮುಂದುವರೆಯಲು ಸಾಧ್ಯವೆಂದರು. ನೌಕರರ ಸಂಘದ ಉಪಾಧ್ಯಕ್ಷ ನಾಗಾನಂದ, ನಿವೃತ್ತ ಮುಖ್ಯ ಶಿಕ್ಷಕ ಅಶ್ವತ್ಥಪ್ಪ , ವೆಂಕಟಮುನಿಯಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಊರಿನ ಹಳೆಯ ವಿದ್ಯಾರ್ಥಿಗಳಾದ ಆನಂದ್, ಮುನಿಕೃಷ್ಣಪ್ಪ, ಹರಿನಾಥ್ ಶಾಲೆಗೆ ದ್ವನಿವರ್ಧಕ ಕೊಡುಗೆಯಾಗಿ ನೀಡಿದರು. ಅಪ್ಪೇಗೌಡ, ಆರ್. ಶ್ರೀನಿವಾಸನ್, ಮಂಜುನಾಥ್, ನಯಾಜ್, ಬಾಲಕೃಷ್ಣೇಗೌಡ, ವಿಜಯ ಲಕ್ಷ್ಮಿ, ಪದ್ಮಾವತಮ್ಮ ಇದ್ದರು.
19ರಂದು ಚಿಂತಾಮಣಿ ನಗರಸಭೆ ಅಧ್ಯಕ್ಷರ ಆಯ್ಕೆ
ಚಿಂತಾಮಣಿ: ನಗರಸಭೆ ಅಧ್ಯಕ್ಷರ ಚುನಾವಣೆ ಮಾ. 19ರಂದು ನಿಗಧಿಯಾದ ಹಿನ್ನಲೆಯಲ್ಲಿ ಬಹುಮತಪಡೆದಿರುವ ಜೆಡಿಎಸ್ನ 16 ಸದಸ್ಯರು ದಕ್ಷಿಣಭಾರತದ ಕಡೆ ಪ್ರವಾಸ ಬೆಳೆಸಿದ್ದಾರೆ.
ನಗರದ ಪಿಟೀಲ್ ಬಡಾವಣೆಯ ಬಳಿ ಇರುವ ಜೆಡಿಎಸ್ ಕಚೇರಿಯಿಂದ ಭಾನುವಾರ ಬೆಳಿಗ್ಗೆ ಎಲ್ಲಾ ಸದಸ್ಯರು ಹವಾನಿಯಂತ್ರಿತ ಮಿನಿಬಸ್ನಲ್ಲಿ ಹೊರಟಿದ್ದು, ಮಾ.19ರಂದು ಚುನಾವಣೆ ಸಮಯಕ್ಕೆ ವಾಪಸ್ ಬರಲು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸೂಚನೆ ಮೇರೆಗೆ ಸದಸ್ಯರು ಪ್ರವಾಸದಲ್ಲಿ ಭಾಗವಹಿಸಿದರು.
ಮಾಜಿ ಶಾಸಕ ಎಂ.ಸಿ. ಸುಧಾಕರ್ ಬೆಂಬಲಿತ 13 ನಗರ ಸಭಾ ಸದಸ್ಯರು ರಾಜಕೀಯ ತಂತ್ರಗಾರಿಕೆ ರೂಪಿಸಿ ನಗರಸಭೆ ಅಧ್ಯಕ್ಷರ ಆಯ್ಕೆ ಮಾಡಲು 3 ಸದಸ್ಯರ ಸಂಖ್ಯಾಬಲ ಪಡೆಯಲು 16ರ ಸದಸ್ಯರಲ್ಲಿ 3 ಸದಸ್ಯರನ್ನು ಆಸೆ ತೋರಿಸಿ ಅಧಿಕಾರ ಹಿಡಿಯಲು ಚಕ್ರವ್ಯೂಹ ನಡೆಸಿರಬಹುದೆಂಬ ಊಹಾ ಪೋಹಾಗಳು ಕೇಳಬಂದ ಬೆನ್ನಲ್ಲೇ ಪ್ರವಾಸ ಕೈಗೊಂಡಿದ್ದಾರೆ. ಜೆಡಿಎಸ್ 16, ಮಾಜಿ ಶಾಸಕ ಸುಧಾಕರ್ ಬೆಂಬಲಿತ 13, ಕಾಂಗ್ರೆಸ್ 1, ಬಿಜೆಪಿ 1, ಒಟ್ಟು 31 ಸದಸ್ಯರಿದ್ದು, ಬುಧವಾರ ಆಯ್ಕೆಪ್ರಕ್ರಿಯೆ ನಡೆಯಲಿದೆ.
ರಂಗೀನಾಟದಲ್ಲಿ ತೇಲಾಡಿದ ಯುವಕರು
ಕೋಲಾರ: ನಗರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಯುವಕರು ಪರಸ್ವರ ಬಣ್ಣಗಳನ್ನು ಮೈಮೇಲೆ ಎರಚಿಕೊಂಡು ಸಂಭ್ರಮಿಸಿದರು.
ಭಾನುವಾರವಾಗಿದ್ದರಿಂದ ಶಾಲಾ-ಕಾಲೇಜುಗಳಿಗೆ ರಜೆ ಇದ್ದುದ್ದರಿಂದ ಮಕ್ಕಳು,ಯುವಕರು ಬೀದಿಗಿಳಿದು ಹೋಕಳಿಯಾಟದಲ್ಲಿ ತಲೀನರಾದರು.
ಪ್ರತಿವರ್ಷದಂತೆ ನಗರದಲ್ಲಿನ ರಾಜಸ್ತಾನ್ ಸಮಾಜದವರು ಲಿಂಗ ಭೇದ-ಭಾವ ಇಲ್ಲದೆ ತಮ್ಮ ಕೇರಿಗಳಲ್ಲಿ ರಂಗೀನಾಟದೊಂದಿಗೆ ಸಾಂಪ್ರದಾಯಿಕ ನೃತ್ಯಗಳ ಮೂಲಕ ಹಬ್ಬವನ್ನು ಸರಡಗರ ಸಂಭ್ರಮದಿಂದ ಆಚರಿಸಿದರು. ಸಮಾಜ ಮುಖಂಡ ಜಯಂತಿಲಾಲ್ ಅವರು ಎಲ್ಲರಿಗೂ ಸಹಿ ವಿತರಣೆ ಮಾಡಿ ಹೋಳಿ ಹಬ್ಬದ ಶುಭಾಶಯ ತಿಳಿಸಿದರು.
ಕೋಲಾರದ ಕಠಾರಿಪಾಳ್ಯದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಜಿಲ್ಲಾಧ್ಯಕ್ಷ ಪ್ರಮೋದ್ ಸೇರಿದಂತೆ ಹತ್ತಾರು ಯುವಕರು ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಕಿಲಾರಪೇಟೆ, ದೊಡ್ಡಪೇಟೆ, ಕೀಲುಕೋಟೆ, ಪಿಸಿ ಬಡಾವಣೆ, ಅರಳೇಪೇಟೆ, ಗೌರಿಪೇಟೆ ಮುಂತಾದ ಕಡೆ ಹೋಳಿ ಹಬ್ಬವನ್ನು ಸಡರಗ ಸಂಭ್ರಮದಿಂದ ಆಚರಿಸಲಾಯಿತು. ಕೋಲಾರ ಹೊರವಲಯದಲ್ಲಿನ ಟಮಕದಲ್ಲಿರುವ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಡಳಿತ ವರ್ಗದ ಸದಸ್ಯರು ಸಹ ಹಬ್ಬದಲ್ಲಿ ತೇಲಾಡಿದರು. ರಾತ್ರಿ ವಿವಿಧ ಬಡಾವಣೆಗಳಲ್ಲಿ ಕಾಮನ ದಹನ ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಧಾರ್ಮಿಕ ಕಾರ್ಯದಿಂದ ಮಾನಸಿಕ ನೆಮ್ಮದಿ
ಮಾಲೂರು: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೂಳುವ ಮೂಲಕ ನಿತ್ಯ ಜೀವನ ಜಂಜಾಟದಲ್ಲಿರುವರು ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ತಾಪಂ ಸದಸ್ಯ ಎಸ್.ವಿ. ಲೋಕೇಶ್ ಹೇಳಿದರು.
ತಾಲೂಕಿನ ಹಾರೋಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಪಲ್ಲಾನಮ್ಮ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಭಾನುವಾರ ಹಮ್ಮಿಕೊಡಿದ್ದ ವಿಶೇಷ ಪೊಜೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ವಿಶ್ರಾಂತಿ ರಹಿತ ಜೀವನ ಚಟುವಟಿಕೆಗಳಲ್ಲಿ ಮನುಷ್ಯ ಮಾನಸಿಕ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಈ ಸಂಧರ್ಭದಲ್ಲಿ ಶಾಂತಿ ಕೇಂದ್ರಗಳಾಗಿರುವ ದೇವಾಲಯಕ್ಕೆ ಭೇಟಿ ಮಾಡಿ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ-ಭಕ್ತಿಯಿಂದ ಭಾಗವಹಿಸಿದರೆ ಮಾನಸಿಕ ನೆಮ್ಮದಿ-ಆರೋಗ್ಯ ಪಡೆಯಬಹುದು ಎಂದರು. ದೇವಾಲಯದ ಟ್ರಸ್ಟಿ ಹಾರೋಹಳ್ಳಿ ಮಂಜುನಾಥ್, ನರಸಿಂಹ, ರಮೇಶ್, ರವಿ ಕುಮಾರ್ ಇದ್ದರು.
12ನೇ ಜೂನಿಯರ್ ಇಂಟರ್ ಅಥ್ಲೆಟಿಕ್
ಕೋಲಾರ: ಕೋಲಾರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ನಿಂದ ಭಾನುವಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 12 ನೇ ಜೂನಿಯರ್ ಜಿಲ್ಲಾ ಅಥ್ಲೆಟಿಕ್ ಕೂಟಕ್ಕೆ ಡಿವೈಎಸ್ಪಿ ಅಶೋಕ್ ಕುಮಾರ್ ಚಾಲನೆ ನೀಡಿದರು.
ಕ್ರೀಡಾಪಟುಗಳು ಸೌಹಾರ್ದತೆಯಿಂದ ಆಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸುವುದರ ಜೊತೆಗೆ ಜಿಲ್ಲೆಯ ಹಿರಿಮೆ ಗಿರಿಮೆಯನ್ನು ಉತ್ತಂಗಕ್ಕೆ ಕೊಂಡೊಯ್ಯುವಂತೆ ಸಲಹೆ ನೀಡಿದರು. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಜಯದೇವ ಮಾತನಾಡಿ, ಜಿಲ್ಲಾ ಅಥ್ಲೆಟಿಕ್ ಕೂಟದಲ್ಲಿ ಉತೀರ್ಣರಾದ ಅಭ್ಯರ್ಥಿಗಳು ಏ.25ರಿಂದ 27ರವರೆಗೆ ಹರಿದ್ವಾರದಲ್ಲಿ ನಡೆಸಯುವ 12 ನೇ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್, ಜಯನಾಥನ್, ಖಜಾಂಚಿ-ಪುರುಷೋತ್ತಮ್, ಜಂಟಿ ಕಾರ್ಯದರ್ಶಿ ರಾಜೇಶ್ ಇದ್ದರು.
ಪೇದೆಗಳ ವಿರುದ್ಧ ವಂಚನೆ ಪ್ರಕರಣ
ಕೆಜಿಎಫ್: ಹಣದಾಸೆಗೆ ಕರ್ತವ್ಯ ಮರೆತು ವ್ಯಕ್ತಿಯೊಬ್ಬರಿಂದ ಬೆಲೆ ಬಾಳುವ ತಾಮ್ರದ ಚೆಂಬು ಕೊಡುವುದಾಗಿ ನಂಬಿಸಿ ಲಕ್ಷಾಂತರ ದರೋಡೆ ನಡೆಸಿದ ಪೊಲೀಸ್ ಪೇದೆಗಳು ಇದೀಗ ವಂಚನೆ ಪ್ರಕರಣ ದಾಖಲಾಗಿ ತಲೆ ಮರೆಸಿಕೊಂಡಿರುವ ಘಟನೆ ರಾಬರ್ಟ್ಸಪ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವರ್ತೂರು ಹೋಬಳಿಯ ಬಳಗೆರೆ ಗ್ರಾಮದ ನಿವಾಸಿ ಕೆ. ಮಂಜುನಾಥ್ ಎಂಬುವರಿಗೆ ತಮ್ಮ ಬಳಿ ಪ್ರಾಚೀನ ಕಾಲದ ಕೋಟ್ಯಂತರ ರುಪಾಯಿ ಬೆಲೆ ಬಾಳುವ ತಾಮ್ರದ ಚೆಂಬು ಇದ್ದು ಇದರಿಂದ ತಮಗೆ ಆಸ್ತಿ ಐಶ್ವರ್ಯ ಲಭಿಸುತ್ತದೆ ಅದನ್ನು ತಮಗೆ 10 ಲಕ್ಷ ರು.ಗೆ ನೀಡುವುದಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ನಿವಾಸಿಗಳಾದ ರಾಮು ಹಾಗೂ ರವಿ ಎಂಬುವರು ತಿಳಿಸಿದ್ದಾರೆ.ಮಾ.13 ರ ರಾತ್ರಿ ಸ್ನೇಹಿತನೊಂದಿಗೆ ಮಂಜುನಾಥ್ ತಮ್ಮ ಕಾರಿನಲ್ಲಿ ರಾಬರ್ಟ್ಸನ್ಪೇಟೆ ಹಾಗೂ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಬಳಿ ಬಂದಿದ್ದು ರಾಮು ಹಾಗೂ ರವಿ ವ್ಯವಹಾರ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ರಾಬರ್ಟ್ಸನ್ಪೇಟೆ ಠಾಣಾ ಪೇದೆಗಳಾದ ಕೃಷ್ಣ ಹಾಗೂ ವೇಣು ಕಾರಿನಲ್ಲಿದ್ದ 10.12 ಲಕ್ಷ ನಗದು ಹಾಗೂ 13 ಸಾವಿರ ಬೆಲೆ ಬಾಳುವ ಸ್ಯಾಮ್ಸಂಗ್ ಮೊಬೈಲ್ ಕಸಿದುಕೊಂಡು ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಂಜುನಾಥ್ ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ನಡೆದು ಎರಡು ದಿನ ಕಳೆದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಮಂಜುನಾಥ್ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ವಿಷಯ ತಿಳಿಸಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದ ಮೇರೆಗೆ ರಾಬರ್ಟ್ಸನ್ಪೇಟೆ ಠಾಣಾ ಪಿಎಸ್ಐ ರಂಗಶಾಮಯ್ಯ ಆರೋಪಿಗಳಾದ ರಾಮು, ರವಿ ಸೇರಿದಂತೆ ಪೊಲೀಸ್ ಪೇದೆಗಳಾದ ಕೃಷ್ಣ ಹಾಗೂ ವೇಣು ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭಾರತ ನಿರ್ಮಾಣ ಜಾಥಾಗೆ ಉತ್ತಮ ಪ್ರತಿಕ್ರಿಯೆ
ಬಂಗಾರಪೇಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳ ಬಗ್ಗೆ ಜನಾಭಿಪ್ರಾಯ ಮೂಡಿಸಲು ಭಾನುವಾರ ಶಾಸಕ ಎಸ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಭಾರತ ನಿರ್ಮಾಣ ಜಾಥಾಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.ತಾಲೂಕಿನ ಬೂದಿಕೋಟೆ ಹೋಬಳಿ ಕೇಂದ್ರದಿಂದ ಬಂಗಾರಪೇಟೆ ಪಟ್ಟಣವರೆಗೂ ಸುಮಾರು 16.ಕಿ.ಮೀ ಪಾದಯಾತ್ರೆಯಲ್ಲಿ ಶಾಸಕರೊಂದಿಗೆ ಪಕ್ಷದ ಮುಖಂಡರು ಕಾರ್ಯಕರ್ತರಲ್ಲದೆ ಸಾರ್ವಜನಿಕರು ಹೆಜ್ಜೆ ಹಾಕಿದರು.
ಹೋಳಿ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆಗಳು
ಚಿಕ್ಕಬಳ್ಳಾಪುರ: ಹೋಳಿ ಹುಣ್ಣಿಮೆ ಪ್ರಯುಕ್ತ ತಾಲೂಕಿನ ವಿವಿಧೆಡೆಯಿರುವ ಶ್ರೀ ನರಸಿಂಹಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಯಿತು.
ತಾಲೂಕಿನ ಆವಲಗುರ್ಕಿ ಗ್ರಾಪಂ ವ್ಯಾಪ್ತಿಯ ಬಾರ್ಲಹಳ್ಳಿಯ ಹಚ್ಚ ಹಸಿರಿನ ವಾತಾವರಣದಲ್ಲಿ ನೆಲೆಸಿರುವ ಶ್ರೀ ಜಾಲಾರಿ ಯೋಗ ಲಕ್ಷ್ಮೀನರಸಿಂಹಸ್ವಾಮಿಯ ಶ್ರೀಮತ್ಕಲ್ಯಾಣ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ತಾಲೂಕಿನ ಅರಿಕೆರೆ, ಹನುಮಂತಪುರ, ಕುರ್ಲಹಳ್ಳಿ, ದಿನ್ನೇಹೊಸಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಜನರು ವಿಶೇಷವಾಗಿ ಅಲಂಕೃತಗೊಂಡಿದ್ದ ಶ್ರೀನರಸಿಂಹಸ್ವಾಮಿಯ ದರ್ಶನ ಪಡೆದರು.
ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ಕೈಗೊಂಡಿದ್ದು ಅನೇಕರು ಮಜ್ಜಿಗೆ, ಪಾನಕ ವಿತರಣೆ ಮಾಡಿದರು. ತಾಲೂಕಿನಲ್ಲಿ 400 ವರ್ಷಗಳ ಇತಿಹಾಸವುಳ್ಳ ಶ್ರೀ ಗೋವರ್ಧನಲ್ಲಿಗಿರಿ ಬೆಟ್ಟದಲ್ಲಿ ಎರಡು ದಿನಗಳಿಂದಲೂ ಬ್ರಹ್ಮರಥೋತ್ಸವದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. ನಗರದ ದೊಡ್ಡಭಜನೆ ರಸ್ತೆಯಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಾಲಯದಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.