ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲೆಗಳ ರಕ್ಷಣೆ ಕುರಿತು ಚಿಂತನ-ಮಂಥನ ಅಗತ್ಯ

Vishwanath S
Updated On : 17 Mar 2014, 1:31 am

ಕೋಲಾರ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಶಿಕ್ಷಣ ವ್ಯವಸ್ಥೆ ಮರೀಚಿಕೆಯಾಗುವುದನ್ನು ತಪ್ಪಿಸಲು ಶಿಕ್ಷಣ ತಜ್ಞರು, ಪೋಷಕರು ಹಾಗೂ ಸಂಘ ಸಂಸ್ಥೆಗಳು ಜಂಟಿಯಾಗಿ ಚಿಂತನ-ಮಂಥನ ನಡೆಸುವ ಮೂಲಕ ಸರ್ಕಾರಿ ಶಾಲೆಗಳ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ತಿಳಿಸಿದರು.
ಇನ್ಪೋಸಿಸ್ ವತಿಯಿಂದ ತಾಲೂಕಿನ ವಕ್ಕಲೇರಿ ಸಮೂಹ ಸಂಪನ್ಮೂಲ ಕೇಂದ್ರಕ್ಕೆ 36 ಉಚಿತ ಕಂಪ್ಯೂಟರ್‌ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿಂತನ ಮಂಥನದ ಮುಖಾಂತರ ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ದಾಖಲು ಮಾಡುವತ್ತಾ ಅಧಿಕೃತ ಸುತ್ತೋಲೆ ಹೊರಡಿಸುವ ಅಗತ್ಯವಿದೆ ಎಂದರು.
ಸರ್ಕಾರ ವಿವಿಧ ರೀತಿಯ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಿ ಶಿಕ್ಷಕರಿಗೆ ತರಬೇತಿ ನೀಡಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ, ಡಿ.ಎಡ್. ತರಬೇತಿ ಪಡೆಯಲು ಸರ್ಕಾರಿ ಸಂಸ್ಥೆಗಳಲ್ಲಿ ಬೆರಳಣಿಕೆ ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ಪ್ರಾಥಮಿಕ ಶಾಲೆಗಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದು ಆತಂಕವನ್ನುಂಟುಮಾಡಿದೆ. ಸರ್ಕಾರ ತನ್ನ ಶಾಲೆಗಳಿಗೆ ಮಕ್ಕಳು ಬರುವಂತೆ ಮಾಡಲು ಆಕರ್ಷಣೀಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆಂದರು.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ.ಎಸ್. ನಾಗರಾಜಗೌಡ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ಓದುವ ಜೊತೆಗೆ ಪಠ್ಯೇತರ ಚಟುವಟಿಕಗಳ ಕಡೆಯೂ ಆಸಕ್ತಿ ವಹಿಸಿ, ಕಲಿಕೆ ಮುಂದಿನ ದಾರಿ ಸುಗಮಗೊಳಿಸಲು ಸನ್ನದ್ಧರಾಗಬೇಕು ಎಂದರು.
ಪ್ರಾಥಮಿಕ ಶಿಕ್ಷಣದಲ್ಲಿ ಕಲಿಯುವ ಶಿಕ್ಷಣ ಜೀವನದ ಎಲ್ಲಾ ಹಂತಗಳಲ್ಲೂ ಮೌಲ್ಯಯುತವಾಗಿದ್ದು, ಇಲ್ಲಿ ಕಲಿಯುವ ವಿದ್ಯಾರ್ಥಿಗೆ ಪೋಷಕರ ಸಂಪೂರ್ಣ ಸಹಕಾರ ದೊರೆತರೆ ಉತ್ತಮ ನಾಗರಿಕ ಶಿಲ್ಪಿಯಾಗಿ ಬೆಳೆಯಲು ಸಾದ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಶ್ರೀನಿವಾಸ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ಮಾತನಾಡಿ, ಇಂದಿನ ಕಲಿಕೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪ್ರಾಮುಖ್ಯವಾದರೂ ಇದರೊಂದಿಗೆ ಕಲೆ. ಸಾಹಿತ್ಯ, ಸಂಗೀತ ನೃತ್ಯ ಮತ್ತಿತರ ಕಡೆಯೂ ವಿದ್ಯಾರ್ಥಿಯ ಆಸಕ್ತಿಯನ್ನಾಧರಿಸಿ ಕಲಿಕೆ ಮೂಡಿಸಬೇಕು. ದಾನಿಗಳು ನೀಡಿರುವ ಕಂಪ್ಯೂಟರ್ ಸೇವೆಯನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಶಿಕ್ಷಕರು ನೆರವಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಆರ್. ವೀರಣ್ಣ ನೇತೃತ್ವದಲ್ಲಿ 36 ಕಂಪ್ಯೂಟರ್‌ಗಳನ್ನು ವಿವಿಧ ಶಾಲೆಗಳಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಹುತ್ತೂರು ಸಂಪನ್ಮೂಲ ವ್ಯಕ್ತಿಯಾಗಿ ವರ್ಗಾವಣೆಯಾದ ಎನ್.ಎಸ್. ಪುಷ್ಪ ರವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಯೋಜಕ ಲಕ್ಷ್ಮಣಪ್ಪ, ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ಸಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಸವಿತಾ ಬಾಬು, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಂ. ಮಂಜುನಾಥ್, ಸೊಣ್ಣೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement