ಹಳೆ ಪುರಸಭೆಗೆ ಕಡೇ ಸಾರಥಿಗಳ್ಯಾರು?
ಶಿಡ್ಲಘಟ್ಟ: ರಾಜ್ಯದ ಅತ್ಯಂತ ಹಳೆಯ ಪುರಸಭೆಗೆ ಕಟ್ಟಕಡೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 17 ರಂದು ನಡೆಯಲಿದೆ.
ಈಗಾಗಲೇ ನಗರ ಸಭೆಯಾಗಿ ಘೋಷಣೆಯಾಗಿದ್ದು ಲೋಕಸಭಾ ಚುನಾವಣೆ ನಂತರ ನಗರ ಸಭೆಯಾಗಿ ಪರಿವರ್ತನೆಯಾಗಲಿದೆ. ಕಟ್ಟಕಡೆಯ ಪುರಸಭಾ ಅಧ್ಯಕ್ಷರೇ ನೂತನ ನಗರಸಭಾ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದ್ದಾರೆ.
ಪುರಸಭೆ ಅಧ್ಯಕ್ಷರಾಗಿ ಸಾಮಾನ್ಯ ಮಹಿಳೆ, ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. 27 ಸದಸ್ಯರ ಪುರಸಭೆಯಲ್ಲಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 1, ಪಕ್ಷೇತರರು 1 ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇದ್ದು ಅಧ್ಯಕ್ಷ ಗಾದೆ ಏರಲಿದ್ದಾರೆ. ಯಾವುದೇ ಕ್ಷಣದಲ್ಲೂ ಪರಿಸ್ಥಿತಿ ಅದಲು ಬದಲಾಗುವ ಸಾಧ್ಯತೆಗಳಿವೆ. ಈ ಹಿಂದಿನ ಪುರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದ್ದರೂ ಕಾಂಗ್ರೆಸ್ ತಂತ್ರಗಾರಿಕೆಯಿಂದ ಜೆಡಿಎಸ್ ಅಧಿಕಾರಿದಿಂದ ವಂಚಿತವಾಯಿತು.
ಪಕ್ಷೇತರ ಸದಸ್ಯ ನಂದ ಕಿಶನ್ ಮತ್ತು ಬಿಜೆಪಿ ಸದಸ್ಯ ರಘುನಾಥ್ ಹಾಗೂ ಶಾಸಕ ರಾಜಣ್ಣರ ಮತ ಸೇರಿ ವಿರೋಧ ಪಕ್ಷದ ಸದಸ್ಯರು 14 ಮಂದಿಯಾಗಲಿದ್ದು, ಕೇವಲ ಒಬ್ಬ ಸದಸ್ಯನ ಮನಸ್ಸು ಬದಲಾದರೂ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಲಿದೆ. ಈಗಾಗಲೇ ಮುನ್ನೆಚೆರಿಕೆಯಾಗಿ ಎಲ್ಲ 14 ಕಾಂಗ್ರೆಸ್ ಸದಸ್ಯರು ಮತ್ತು ಜೆಡಿಎಸ್ನ 11 ಮಂದಿ ಪ್ರವಾಸದಲ್ಲಿದ್ದು, ಚುನಾವಣಾ ಸಮಯಕ್ಕೆ ಹಾಜರಾಗಲಿದ್ದಾರೆಂದು ಹೇಳಲಾಗಿದೆ.
ಪುರಸಭೆ ಇತಿಹಾಸ: ಸ್ವಾತಂತ್ರ್ಯಕ್ಕೂ ಮುಂಚಿನ 1921ರಲ್ಲಿ ಪ್ರಾರಂಭವಾದ ಇಲ್ಲಿನ ಪುರಸಭೆ ಇದೀಗ ಇತಿಹಾಸ ಸೇರಲಿದೆ. ಈ ಹಿಂದೆ 1947 ಕ್ಕೂ ಮುಂಚೆ ತಾಲೂಕಿನ ತಹಸೀಲ್ದಾರರೇ ಪುರಸಭಾ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 1921ರಲ್ಲಿ ಉಪಾಧ್ಯಕ್ಷರು ಸೇರಿದಂತೆ 6 ಮಂದಿ ಪುರಸಭಾ ಸದಸ್ಯರ ಪುರಸಭೆ ಅಸ್ಥಿತ್ವದಲ್ಲಿತ್ತು. ಅಂದಿನ ಜನ ಸಂಖ್ಯೆ ಸುಮಾರು 3,697 ಇದ್ದು ಹಿಂದುಗಳು 2,955, ಪುರುಷರು 1,510, ಮಹಿಳೆಯರು 1,445, ಮೊಹಮ್ಮದೀಯರು ಒಟ್ಟು 719 ಪುರಷರು 364, ಮಹಿಳೆಯರು 355, ಕ್ರೈಸ್ತರು 21 ಮಂದಿ 12 ಮಂದಿ ಪುರುಷರು, 9 ಮಂದಿ ಮಹಿಳೆಯರು ಹಾಗೂ ಅನ್ಯರ ಸಂಖ್ಯೆ 2 ಇತ್ತು.
1921-24ರ ಪುರಸಭೆಯ ಆದಾಯ 6,137 ಆಗಿದ್ದು 2001-2002ರ ಜನಗಣತಿಯಂತೆ ಪುರಸಭೆಯ ವಿಸ್ತೀರ್ಣ 10 ಚದರ ಕಿ.ಮೀ. 1984ರಲ್ಲಿ ಅಂದಿನ ಪುರಸಭಾ ಅಧ್ಯಕ್ಷ ಬಾಸೀದ್ ಅಧ್ಯಕ್ಷತೆ ಅವಧಿಯಲ್ಲಿ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಲಾಯಿತು.
2012ರ ಜನಗಣತಿಯಂತೆ ಪಟ್ಟಣದ ಪುರಸಭೆಯ ಜನಸಂಖ್ಯೆ ದಾಟಿದ್ದು ಸರ್ಕಾರ ನಗರಸಭೆಯಾಗಿ ಘೋಷಣೆ ಮಾಡಿದೆ. ಈ ಹಿಂದೆ ಬಸ್ ನಿಲ್ದಾಣದಿಂದ ಪುರ ಪೊಲೀಸ್ ಠಾಣೆಯವರೆಗೂ ಸಿದಾರ್ಥ ನಗರದಿಂದ ಈಗಿನ ಪ್ರೇಮ ನಗರವರೆಗೂ ನಗರಸಭೆ ಘೋಷಣೆಯಾದಲ್ಲಿ ಬೂದಾಳ ವಿರಾಪುರ, ಪಶ್ವಿಮದ ಹಂದಿಗನಾಳ. ಕೇಶವ ಪುರ, ಪಂಚಾಯತಿಗಳು ಉತ್ತರದ ಆನೂರು ಮತ್ತು ಹನುಮಂತಪುರ ಗ್ರಾಪಗಳು ಪುರಸಭಾ ವ್ಯಾಪ್ತಿಗೆ ಸೇರಲಿದೆ. ಪುರಸಭೆಯಿಂದ ನಗರಸಭೆಗೆ ಬಡ್ತಿ ಹೊಂದಲಿರುವ ಪಟ್ಟಣಕ್ಕೆ ಇನ್ನು ಹೆಚ್ಚಿನ ಸೌಲಭ್ಯಗಳು ಸಿಗಲಿದ್ದು ಮನೆಗಳ ಮತ್ತು ವಾಣಿಜ್ಯ ಕಟ್ಟಡಗಳ ಕಂದಾಯ ಇತರೆ ಸೇವಾ ಶುಲ್ಕಗಳು ಹೆಚ್ಚಾಗಲಿವೆ.
60 ವರ್ಷಗಳ ಹಿಂದೆ ಇದ್ದಷ್ಟೇ ಇಂದು ಪೌರ ನೌಕರರಿದ್ದು ಪಟ್ಟಣದ ಹೊರವಲಯಗಳಾದ ಆಜಾದ್ ನಗರ, ಸಂತೂಷ್ ನಗರ, ರಹಮತ್ ನಗರ, ಹಾಗೂ ಒಂದು ಎರಡು ಮೂರನೇ ಕಾರ್ಮಿಕ ನಗರಳೊಂದಿಗೆ ರಾಜೀವ್ ಗಾಂದಿ ಬಡಾವಣೆ, ಸೇರಲಿದ್ದು, ದಕ್ಷಿಣದಲ್ಲಿ ಪ್ರೇಮ ನಗರ, ಸಿ.ಆರ್. ಲೇಔಟ್, ತಿಮಯ್ಯ ಲೇಔಟ್, ನಲ್ಲಿ ಮರದ ಹಳ್ಳಿ, ಕನಕ ನಗರ, ಗಣೇಶ ನಗರ, ಗಾಂದಿನಗರ, ಮಾರುತಿ ನಗರಗಳು ಹೊಸದಾಗಿ ನಿರ್ಮಾಣವಾಗಿದ್ದು ಹೊರವಲಯದ ಈ ಬಡಾವಣೆಗಳಲ್ಲಿ ಮೂಲ ಸೌಲಬ್ಯಗಳ ಕೊರತೆ ಇದೆ. 3 ತಿಂಗಳಿಗೊಮ್ಮೆ ಪೌರ ಕಾರ್ಮಿಕರ ಸೇವೆ ನೀಡುವುದು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ.
ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಮುನಿಯಪ್ಪರವರ ದೂರ ದೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಳ ಚರಂಡಿ ವ್ಯವಸ್ಥೆಯನ್ನು ಎಲ್ಲ ಬಡಾವಣೆಗಳಿಗೂ ಅಳವಡಿಸಲಾಗಿದೆ. ಲಕ್ಷಾಂತರ ರು.ಗಳ ವೆಚ್ಚದಲ್ಲಿ ಟ್ರೀಟ್ಮೆಂಟ್ ಪ್ಲ್ಯಾಂಟ್ನಿಂದಾಗಿ ಪಟ್ಟಣದ ದುರ್ನಾತ ಕಡಿಮೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರವಾಗಿದ್ದು 200ಕ್ಕೂ ಅಧಿಕ ಕೊಳವೆ ಬಾವಿಗಳು ವಿಫಲವಾಗಲು ಕಾರಣ 1555ರಲ್ಲಿ ನಿರ್ಮಿಸಲಾದ ಪೂರ್ವ ಪಶ್ವಿಮ ಅಮ್ಮನ ಕೆರೆ ಗೌಡನ ಕೆರೆಗಳು ಅತಿಕ್ರಮಣಕಾರರ ಪಾಲಾಗಿ ನೀರು ಸಂಗ್ರಹವಾಗದೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಮುಂಬರುವ ನಗರ ಸಭೆಯ ಅಧಿಕಾರರೂಢ ಪಕ್ಷಕ್ಕೆ ನೀರಿನ ಸಮಸ್ಯೆಯೇ ಬೃಹದಾಕಾರವಾಗಿ ಕಾಡಲಿದೆ.
-ರೂಪಸಿ ರಮೇಶ್