60 ಲೀಟರ್ ನಕಲಿ ಮದ್ಯ ವಶ
ಕೋಲಾರ: ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಮುರಳಿ, ಇನ್ಸ್ಪೆಕ್ಟರ್ ಜಯರಾಂ ಹಾಗೂ ಸಿಬ್ಬಂದಿ ತಮಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಕೋಲಾರ ತಾಲೂಕಿನ ನರಸಾಪುರ ಬಳಿಯ ಕಾಮತ್ ಹೊಟೇಲ್ ಬಳಿ ವಾರಸುದಾರರು ಇಲ್ಲದ 60 ಲೀಟರ್ ನಕಲಿ(ವಿಸ್ಕಿ) ಮದ್ಯ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಳ್ಳಲಾದ ನಕಲಿ ಮದ್ಯವನ್ನು ಬೆಂಗಳೂರು ಕಡೆಯಿಂದ ಆಂಧ್ರಪ್ರದೇಶಕ್ಕೆ ಸಾಗಾಣೆ ಮಾಡಲು ಆರೋಪಿಗಳು ವಿಫಲ ಯತ್ನ ನಡೆಸಿ ದಾಳಿಯ ಭಯದಿಂದ ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮದ್ಯ ಹಂಚಿಕೆ ಮಾಡಲು ಈ ರೀತಿ ನಕಲಿ ವಿಸ್ಕಿ ಕೊಂಡೊಯ್ಯುಲು ಯತ್ನಿಸಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಆರೋಪಿಗಳಿಗಾಗಿ ಶೋಧನೆ ನಡೆದಿದೆ, ಅಬಕಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
90 ಕೆಜಿ ಗಾಂಜಾ ವಶ
ಬಾಗೇಪಲ್ಲಿ: ಇಲ್ಲಿಗೆ ಸಮೀಪದ ಕಾರುಕೂರು ಕ್ರಾಸ್ ಬಳಿ ಸರಕು ಸಾಗಾಣಿಕೆ ವಾಹನವೊಂದರಲ್ಲಿ ಆಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 50 ಸಾವಿರಕ್ಕೂ ಅಧಿಕ ಬೆಲೆಬಾಳುವ 90 ಕೆಜಿ ಗಾಂಜಾ ಸೊಪ್ಪು ಜೊತೆಗೆ, ವಾಹನವನ್ನೂ ವಲಯ ಅರಣ್ಯಾಧಿಕಾರಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಗೇಪಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಹಮ್ಮದ್ ಅಮಾನುಲ್ಲಾ ಹಾಗೂ ಅವರ ಸಿಬ್ಬಂದಿ ವರ್ಗ ಸೋಮವಾರ ಬೆಳಗಿನ ಜಾವ ಕಾರುಕೂರು ಕ್ರಾಸ್ ಬಳಿ ಗುಸ್ತು ತಿರುಗುತ್ತಿದ್ದಾಗ ತಾಲೂಕಿನ ಚೇಳೂರು ಕಡೆಯಿಂದ ಬಾಗೇಪಲ್ಲಿ ಕಡೆಗೆ ಸರಕು ಸಾಗಾಣಿಕೆ ವಾಹನ ವೇಗವಾಗಿ ಬರುತ್ತಿರುವುದನ್ನು ಗಮನಿಸಿ ಅನುಮಾನ ಬಂದು ವಾಹನವನ್ನು ನಿಲ್ಲಿಸಲು ಮುಂದಾಗಿದ್ದು, ಆಗ ವಾಹನದ ಚಾಲಕ ಗಾಬರಿಗೊಂಡು ವಾಹನ ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ನಂತರ ಕ್ಲೀನರ್ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ವಲಯ ಅರಣ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ ವರ್ಗ ವಾಹನವನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಸುಮಾರು 9 ಮೂಟೆ ಬತ್ತದ ಹೊಟ್ಟಿನ ನಡುವೆ 2.5 ಕೆ.ಜಿ ತೂಕದ ಸುಮಾರು 37 ಚೀಲಗಳಲ್ಲಿ ಸುಮಾರು 50 ಸಾವಿರ ರೂ.ಗಳಿಗೂ ಅಧಿಕ ಬೆಲೆ ಬಾಳುವಂತಹ ಸುಮಾರು 90 ಕೆ.ಜಿಯಷ್ಟು ಗಾಂಜಾ ಸೊಪ್ಪುನ್ನು ಆಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.