ಜಿಲ್ಲೆಗೆ ಮುನಿಯಪ್ಪ ಕೊಡುಗೆ ಶೂನ್ಯ
ಕೆಜಿಎಫ್: ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೇಂದ್ರ ಸಚಿವ ಕೆ. ಎಚ್.ಮುನಿಯಪ್ಪ ಜಿಲ್ಲೆಗೆ ಯಾವುದೇ ಮೂಲ ಸೌಕರ್ಯ ಒದಗಿಸದೆ ಅಭಿವೃದ್ಧಿ ಕಡೆಗಣಿಸಿದ್ದು, ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ ಎಂದು ಕೋಲಾರ ಲೋಕಸಭಾ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಆರೋಪಿಸಿದರು.
ಮಾಜಿ ಶಾಸಕ, ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ನಗರದ ಮಿನಿ ಇಬ್ರಾಹಿಂ ರಸ್ತೆ, ಎ.ಜಿ.ಮಾರುಕಟ್ಟೆ, ಪ್ರಿಚರ್ಡ್‌ರಸ್ತೆ, ಗಾಂಧಿ ವೃತ್ತ, ಸೂರಜ್‌ಮುಲ್ ವೃತ್ತ, ಆಂಡ್ರಸನ್‌ಪೇಟೆ ಮುಂತಾದ ಪ್ರದೇಶಗಳಲ್ಲಿ ಬಿರುಸಿನ ಮತಯಾಚನೆ ನಡೆಸಿ ಮಾತನಾಡಿದರು. ಕೇಂದ್ರ ಸಚಿವ ಮುನಿಯಪ್ಪ ಜನತೆಯನ್ನು ವಂಚಿಸಿ, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಕೆಜಿಎಫ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಲಿ, ಬಿಜಿಎಂಎಲ್ ಚಿನ್ನದಗಣಿ ಮುಚ್ಚಿದ ನಂತರ ಇಲ್ಲಿನ ಸಾವಿರಾರು ಕಾರ್ಮಿಕರಿಗೆ ಕುಟುಂಬ ವರ್ಗಕ್ಕೆ ಮತ್ತು ಯುವ ಪೀಳಿಗೆ ಚಿನ್ನದ ಗಣಿಯನ್ನು ಪುನರಾರಂಭಿಸುವುದಕ್ಕೆ ಮತ್ತು ಕೈಗಾರಿಕೆಯನ್ನು ಸ್ಥಾಪಿಸುವುದಕ್ಕೆ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
30 ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆಯಿಂದ ಮತ್ತು ಅಭ್ಯರ್ಥಿಗಳಿಗೆ ಆಮಿಷವೊಡ್ಡಿ ಅವರನ್ನು ಖರೀದಿಸುತ್ತಿದ್ದ ಮುನಿಯಪ್ಪ ಅವರು ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಹಣದಾಸೆಗೆ ಅವರ ಹಿಂದೆ ಹೋಗುವನಲ್ಲ ಎಂದರು.
ಕಾಂಗ್ರೆಸ್ ಎಂಎಲ್‌ಸಿ ಸಹೋದರ ಬೆಂಬಲ: ಕಾಂಗ್ರೆಸ್ ಎಂಎಲ್‌ಸಿ ನಜೀರ್‌ಅಹಮದ್ ಸೋದರ ಅಸ್ಲೆ ಹಾಗೂ ಅವರ ಬೆಂಬಲಿಗರು ಬಹಿರಂಗವಾಗಿ ಕೇಶವರೊಂದಿಗೆ ಕೈಜೋಡಿಸಿ ಮತಯಾಚಣೆಯಲ್ಲಿ ಪಾಲ್ಗೊಂಡಿದ್ದು ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.
ಮಾಜಿ ಶಾಸಕ ಎಂ.ಭಕ್ತವತ್ಸಲಂ ಹಾಗೂ ಉಪಾಧ್ಯಕ್ಷ ದಾಸ್‌ಚಿನ್ನಸವರಿ ಮಾತನಾಡಿ, ಕೇಂದ್ರ ಸಚಿವ ಮುನಿಯಪ್ಪ ಕೆಜಿಎಫ್ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲ.
ಚಿನ್ನದ ಗಣಿಯನ್ನು ಮುಚ್ಚಿದ ನಂತರ ಕಾರ್ಮಿಕರು ಸಂಕಷ್ಟ ಜೀವನ ನಡೆಸುತ್ತಿದ್ದು, ಸಿಲಿಕಾಸಿಸ್ ಖಾಯಿಲೆಯಿಂದ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರು ಮೃತ ಪಟ್ಟಾಗ ಮಾನವಿಯತೆ ದೃಷ್ಟಿಯಿಂದಲೂ ಬಂದು ನೋಡಿಲ್ಲ ಇಂತಹವರಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮುಖಂಡರಾದ ಗೋಪಾಲನ್, ಅರಿವಳಗನ್, ಚಾನ್‌ಬಾಯ್, ಶ್ರೀಧರ್, ನಗರಸಭೆ ಮಾಜಿ ಅಧ್ಯಕ್ಷರಾದ ಅತ್ತಾವುಲ್ಲಾ, ದಯಾನಂದ್ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.