ಪರಮಶಿವಯ್ಯ ವರದಿ ಜಾರಿ; ಸರ್ಕಾರಗಳು ವಿಫಲ: ಬೇಸರ
ಚಿಂತಾಮಣಿ: ನೀರಾವರಿ ತಜ್ಞ ಹಾಗೂ ಶಾಶ್ವತ ನೀರಾವರಿ ಯೋಜನೆ ಹರಿಕಾರ ಡಾ.ಜಿ.ಎಸ್.ಪರಮಶಿವಯ್ಯನವರ ಯೋಜನೆ ಜಾರಿಗೆ ತರುವಲ್ಲಿ ಸರ್ಕಾರಗಳು ವಿಫಲಗೊಂಡಿವೆಯೆಂದು ಕರವೇ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಡಿಪೋ ಮುಂಭಾಗದಲ್ಲಿನ ಗಣಪತಿ ದೇವಾಲಯದ ಸಭಾಂಗಣದಲ್ಲಿ ಡಾ.ಜಿ.ಎಸ್.ಪರಮಶಿವಯ್ಯನವರ ಭಾವಚಿತ್ರಕ್ಕೆ ನಮನ ಸಲ್ಲಿಸಿ 2 ನಿಮಿಷಗಳ ಕಾಲ ಮೌನಾಚರಣೆ ಮಾಡುವುದರೊಂದಿಗೆ ಶ್ರದ್ಧಾಂಜಲಿ ಅರ್ಪಿಸಿ, ನಂತರ ಮಾತನಾಡಿದ ಅವರು, ಸರ್ಕಾರದಿಂದ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ.
ರಾಜ್ಯ ಸರ್ಕಾರ ಅವಿಭಜಿತ ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯನ್ನು ಶಿಲಾನ್ಯಾಸ ಮಾಡಿ ಪರಮಶಿವಯ್ಯನವರ ವರದಿಯನ್ನು ಮೂಲೆಗುಂಪು ಮಾಡಿ ಅನ್ಯಾಯವೆಸಗಿದೆ ಎಂದು ದೂರಿದರು.
ನಂತರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿ, ಆಂಧ್ರಪ್ರದೇಶದಲ್ಲಿ ತೆಲಂಗಾಣ ಮಾದರಿಯಲ್ಲಿ ಹೋರಾಟ ಮಾಡಿದಾಗ ಮಾತ್ರ ಪರಮಶಿವಯ್ಯ ವರದಿ ಜಾರಿಯಾಗಲು ಸಾಧ್ಯವೆಂದು ಹೇಳಿದರು.
ತಾಲೂಕು ಅಧ್ಯಕ್ಷ ಎನ್.ಅಂಬರೀಷ್, ರಿವಾರ್ಡ್ ಸಂಂಸ್ಥೆ ಮುಖ್ಯಸ್ಥ ಹರಿಪ್ರಸಾದ್, ಕರವೇ ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ, ಖಜಾಂಚಿ ಆರ್.ನಾಗರಾಜ್, ಕಾರ್ಯದರ್ಶಿ ಮಾ.ಷ.ಚಂದ್ರಶೇಖರ್, ಮುಖಂಡರಾದ ಶ್ರೀನಿವಾಸ್, ಶಂಕರ್, ಶಬೀರ್ ಅಹಮದ್, ಜಯರಾಮ್, ಮುನಿನಾರಾಯಣ, ರಾಮಚಂದ್ರ, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.