ಬಾಹುಬಲಿಗೆ ಮಸ್ತಕಾಭಿಷೇಕ
ಗೌರಿಬಿದನೂರು: ಇಲ್ಲಿನ ಕೋಡಿ ಬ್ರಹ್ಮದೇವರ ದೇವಾಲಯದ ಬ್ರಹ್ಮಗಿರಿಯಲ್ಲಿ ಭಗವಾನ್ ಬಾಹುಬಲಿಗೆ ವಾರ್ಷಿಕೋತ್ಸವ ಅಂಗವಾಗಿ ಮಹಾಮಸ್ತಕಾಭಿಷೇಕ ಏರ್ಪಡಿಸಿದ್ದು ಕ್ಷೀರಾಭಿಷೇಕ, ಚಂದನಾಭಿಷೇಕ, ಕುಂಕುಮಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ ಭಕ್ತ ಸಮುದಾಯದಿಂದ ನೆರವೇರಿತು. ದೇವಾಲಯದಲ್ಲಿ ಜೈನ ಸಮುದಾಯದಿಂದ ವಿವಿಧ ಪೂಜಾ ವಿಧಿವಿಧಾನ ನೆರವೇರಿತು. ಕೋಡಿ ಬ್ರಹ್ಮದೇವರಿಗೆ ಬೆಳ್ಳಿ ಕವಚ ಅಲಂಕಾರ, ಕಳಸ ಪೂಜೆ, ಶಿಥಿಲನಾಥರಿಗೆ ವಿಶೇಷ ಪೂಜೆ ಹಾಗೂ ಬ್ರಹ್ಮಗಿರಿಯ ಭಗವಾನ್ ಬಾಹುಬಲಿಗೆ ಮಹಾಮಜ್ಜನ ಏರ್ಪಡಿಸಲಾಗಿತ್ತು.
ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಭಟ್ಟಾಚಾರ್ಯರು ನೂತನ ಸಭಾ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.
ಮಹಾ ಮಜ್ಜನ: ಭಗವಾನ್ ಬಾಹುಬಲಿಗೆ ಭಕ್ತ ಸಮುದಾಯ ಸಮ್ಮುಖದಲ್ಲಿ ಮಹಾಮಜ್ಜನ ಮಾಡಲಾಯಿತು. ಕ್ಷೀರಾಭಿಷೇಕ, ಕುಂಕುಮಾಭಿಷೇಕ, ಕಬ್ಬಿನಹಾಲು ಅಭಿಷೇಕ, ಚಂದನಾಭಿಷೇಕ ಮಾಡಲಾಯಿತು. ನಾಡಿನ ಮೂಲೆ ಮೂಲೆಯಿಂದ ಜೈನ ಸಮುದಾಯದ ಭಕ್ತರು ಆಗಮಿಸಿದ್ದರು.