ಭರವಸೆ ಈಡೇರಿಸದವರಿಗೆ ಸೋಲು ಖಚಿತ
ಬಾಗೇಪಲ್ಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ 18 ಭರವಸೆಗಳಲ್ಲಿ ಕನಿಷ್ಠ ಒಂದನ್ನೂ ಈಡೇರಿಸುವಲ್ಲಿ ವಿಫಲರಾಗಿರುವ ಕೇಂದ್ರ ಸಚಿವ ವೀರಪ್ಪಮೊಯ್ಲಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಚುನಾವಣಾ ಪ್ರಚಾರದ ಕಚೇರಿಯನ್ನು ಉದ್ಟಾಟಿಸಿದ ನಂತರ ಮಾತನಾಡಿದ ಅವರು, ಇಡೀ ದೇಶದ ಜನತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ರವರನ್ನು ಈ ದೇಶದ ಪ್ರಧಾನ ಮಂತ್ರಿಯನ್ನಾಗಿ ಒಮ್ಮೆಗೆ ನೋಡುವಂತಹ ಕಾತುರದಲ್ಲಿದ್ದಾರೆ ಎಂದರು.
ದೇಶದ ಜನತೆಗೆ ದಿನನಿತ್ಯದ ವಸ್ತು ಸೇರಿದಂತೆ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಏರಿಸಿರುವುದೇ ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿರುವ ಸಾಧನೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.
ಜಾತಿ, ಧರ್ಮಗಳ ಆಧಾರದ ಮೇಲೆ ನಾನು ಮತ ಕೇಳುವ ಪ್ರಶ್ನೆಯೇ ಇಲ್ಲ, ನನಗೆ ಎಲ್ಲಾ ಜಾತಿ,ಧರ್ಮಗಳ ಜನರು ಒಂದೇ, ಎಲ್ಲಾ ಜಾತಿ ಮತ ಮತ್ತು ಧರ್ಮಗಳ ಜನರು ಒಂದಾಗಿ ಮತ ಚಲಾಯಿಸಿದಾಗ ಮಾತ್ರ ಯಾವುದೇ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ನಾನು ಎಂದೂ ಸಹ ಜಾತಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದವನಲ್ಲ ಎಂದ ಅವರು, ಈ ಹಿಂದಿನ ಯುಪಿಎ ಸರ್ಕಾರ ಜನ ವಿರೋಧಿ ಹಾಗೂ ಭ್ರಷ್ಟ ಆಡಳಿತದಿಂದ ಬೇಸತ್ತ ದೇಶದ ಜನರು ಯುಪಿಎ ಸರ್ಕಾರದ ವಿರುದ್ದ ತಿರುಗಿ ಬೀಳುವುದು ಖಚಿತ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸ್ಫರ್ಧೆ ಮಾಡಿದರೂ ಸಹ ನನ್ನ ಗೆಲುವಿಗೆ ಯಾವುದೇ ರೀತಿಯ ಅಡಿಯಾಗಲಾರದು ಎಂದರು. ಈಗಾಗಲೇ ಈ ವಿಧಾನಸಭೆ ಕ್ಷೇತ್ರದ 31 ಗ್ರಾ.ಪಂ.ಗಳ ಪೈಕಿ ಸುಮಾರು 20 ಗ್ರಾಪಂ ಬೂತ್ಮಟ್ಟದ ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಸ್ಥಳೀಯ ಬಿಜೆಪಿ ಮುಖಂಡರ ಸಮುಖದಲ್ಲಿ ನಡೆಸಲಾಗಿದೆ. ಉಳಿದ ಗ್ರಾ.ಪಂ.ಹೋಬಳಿ ಹಾಗೂ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಲು ಸಿದ್ದತೆ ನಡೆಸುತ್ತಿರುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಇತಿಹಾಸ ಪ್ರಸಿದ್ಧ ಸೋಮಘಟ್ಟ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು.
ಹಿರಿಯ ಮುಖಂಡ ಕೆ.ಆರ್. ಅಂಜನಪ್ಪ, ಡಾ.ಆದಿಲಕ್ಷ್ಮಮ್ಮ, ಲಕ್ಷ್ಮೀಪತಿರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಡಲ ಅಧ್ಯಕ್ಷ ಲಕ್ಮಿನಾರಾಯಣ. ಜಿ.ಎಸ್. ಚೌಡರೆಡ್ಡಿ, ತಾಲೂಕು ಪ್ರಧಾನ ಮಲ್ಲಿಕಾರ್ಜುನರೆಡ್ಡಿ, ತಾಲೂಕು ಮಹಿಳಾ ಘಟಕ ಅಧ್ಯಕ್ಷ ಮಂಜುಳಬಾಯಿ, ಜಿಲ್ಲಾ ಕಾರ್ಯದರ್ಶಿ ಮಂಜುಳ, ಜಿಲ್ಲಾ ಮಹಿಳಾ ಘಟಕದ ಮಿಠಾಯಿ ಮಂಜುಳಮ್ಮ, ಚೇಳೂರು ಚಂದ್ರಣ್ಣ ಮತ್ತಿತರರು ಇದ್ದರು.