ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಇಂದು ಉಮೇದುವಾರಿಕೆ ಸಲ್ಲಿಕೆ ಸಂಭವ

Mainashree
Updated On : 19 Mar 2014, 12:17 pm

ಕೋಲಾರ: ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ ಸಹಿ ಇರುವ ಎ ಮತ್ತು ಬಿ ಫಾರಂ ಕೈ ಸೇರಿದ ನಂತರವೇ ನಾಮಪತ್ರ ಸಲ್ಲಿಸುವುದಾಗಿ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ತಮ್ಮ ಅಪ್ತರ ಬಳಿ ತಿಳಿಸಿದ್ದಾರೆ.
ಬೆಂಗಳೂರಿನ ಚಾನ್ಸಲರ್ ಹೊಟೇಲಿನಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಮುಖಂಡರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುನಿಯಪ್ಪ, ಎ ಫಾರಂ ತರಲು ಕೆಪಿಸಿಸಿಯ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ದೆಹಲಿಗೆ ಕಳುಹಿಸಲಾಗಿದೆ. ಮಂಗಳವಾರ ಸಂಜೆಯೊಳಗೆ ಎ ಮತ್ತು ಬಿ ಫಾರಂ ತಮಗೆ ದೊರೆತಲ್ಲಿ ಬುಧವಾರವೇ ನಾಮಪತ್ರ ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.
ಬುಧವಾರ ದಿನ ಚೆನ್ನಾಗಿರುವುದರಿಂದ ಅನೇಕರು ಅಂದೇ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನೀವು ಸಹ ಅದೇ ದಿನ ಉಮೇದುವಾರಿಕೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂದು ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ ಮುನಿಯಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ಸ್ವಾಮಿ ಮಾತನ್ನು ಧಿಕ್ಕರಿಸದ ಮುನಿಯಪ್ಪ, ತಮ್ಮ ಅಪ್ತರಿಗೆ ಬುಧವಾರ ಬೆಳಿಗ್ಗೆ 10ರಿಂದ 11.30 ಗಂಟೆಯೊಳಗೆ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಎಸ್ಸಿ ವಿಭಾಗದ ಸಂಚಾಲಕ ಕುಮಾರ್ ಅವರು ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮುನಿಯಪ್ಪಅವರಿಗೆ ಬುಧವಾರ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಐದು ಜನರಿಗೆ ಮಾತ್ರ ಅವಕಾಶ ನೀಡುವುದರಿಂದ ಮುನಿಯಪ್ಪ ಅವರೇ ತಮ್ಮ ಜೊತೆಗೆ ಯಾರಿರಬೇಕೆಂಬುದನ್ನು ನಿರ್ಧರಿಸಲಿ ಎಂದು ರಮೇಶ್‌ಕುಮಾರ್ ಸಲಹೆ ನೀಡಿದ್ದಾರೆ.
ಉಮೇದುವಾರಿಕೆ ಸಲ್ಲಿಕೆ ಸಂದರ್ಭದಲ್ಲಿ ಮುನಿಯಪ್ಪ ಅವರ ಪತ್ನಿ ಮತ್ತು ಪುತ್ರಿ ಜೊತೆಗಿರಬೇಕೆಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿರುವುದರಿಂದ ಅಂತಿಮ ನಿರ್ಧಾರವನ್ನು ಮುನಿಯಪ್ಪನವರಿಗೆ ಬಿಡಲಾಗಿದೆ.
ಜೆಡಿಎಸ್ ಅಭ್ಯರ್ಥಿ ಕೇಶವ ಅವರು ಕಾರ್ಯಕರ್ತರ ಪರಿಚಯಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದರೆ, ಬಿಜೆಪಿಯ ಎಂ.ನಾರಾಯಣಸ್ವಾಮಿ ಈಗಾಗಲೇ ಒಂದು ಸುತ್ತು ಕ್ಷೇತ್ರ ಪ್ರವಾಸ ಮುಗಿಸಿ ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement