ಪೂಜಮ್ಮ ದೇವಿಯ ಕರಗ ಮಹೋತ್ಸವ
ಶಿಡ್ಲಘಟ್ಟ: ಪಟ್ಟಣದಲ್ಲಿ ಪೂಜಮ್ಮ ದೇವಿಯ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಪಾರಂಪರಿಕವಾಗಿ ನಡೆದು ಬರುತ್ತಿರುವ ಪೂಜಮ್ಮ ದೇವಿಯ ಕರಗ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಸಿದ್ದು ಕರಗವನ್ನು ಮುಳಬಾಗಿಲಿನ ಎಂ.ಶಂಕರ್ ಹೊತ್ತಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಾರಂಭವಾದ ಕರಗ ಮಹೋತ್ಸವ ಮನೆ ಮನೆಯ ಮುಂದೆ ನಿಂತು ಪೂಜೆ ಸ್ವೀಕರಿಸಿ ಮುಂದೆ ಸಾಗಿತು. ತಮಟೆ ವಾದಕ್ಕೆ ಹೆಜ್ಜೆ ಹಾಕುತ್ತಿದ್ದ ಕರಗ ಮಹೋತ್ಸವ ಜನರಿಗೆ ಮನರಂಜನೆ ನೀಡಿತು.
ಪೂಜಮ್ಮ ದೇವಿಯ ಕರಗ ಮಹೋತ್ಸವ ಪ್ರಯುಕ್ತ ಆರ್ಕೆಸ್ಟ್ರಾ, ಕೀಲು ಕುದುರೆ, ಮುತ್ತಿನ ಪಲ್ಲಕ್ಕಿ, ಬ್ಯಾಂಡ್ಸೆಟ್, ಒನಕೆ ಕರಗದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.