ಸುದ್ದಿ ಸಂಕ್ಷೇಪ
ಹಣ್ಣು ವಿತರಣೆ
ಚಿಂತಾಮಣಿ: ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರ 45 ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ವೃದ್ಧರಿಗೆ ಹೊದಿಕೆ ಮತ್ತು ಹಣ್ಣು ವಿತರಿಸಲಾಯಿತು. ನಗರದ ಡೈಮಂಡ್ ಟಾಕೀಸ್ ರಸ್ತೆಯ ವಿಷ್ಣು ಅನಾಥ ಆಶ್ರಮದ ವೃದ್ಧರಿಗೆ ಹೊದಿಕೆ, ಹಣ್ಣು, ಬ್ರೆಡ್, ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಸ್ವಶ್ತಿಕ್ ಶಂಕರರೆಡ್ಡಿ ಮಾತನಾಡಿದರು. ಎನ್. ಸೋಮು, ಎಂ.ಎಸ್.ಎನ್. ನರೇಶ್, ರಮೇಶ್ ಬಾಬು, ಮಂಜುನಾಥ್, ಹರೀಶ್ ಇದ್ದರು.
ಭೂವಿವಾದ ಘರ್ಷಣೆ: ಹಲವರಿಗೆ ಗಾಯ
ಚಿಂತಾಮಣಿ: ಭೂವಿವಾದ ಹಿನ್ನೆಲೆಯಲ್ಲಿ ದಾಯಾದಿಗಳ 2 ಗುಂಪುಗಳ ನಡುವೆ ಮಾರಿ ಮಾರಿ ನಡೆದು ಹಲವರು ತೀವ್ರ ಗಾಯಗೊಂಡಿರುವ ಘಟನೆ ನಂದಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ನಂದಿಗಾನಹಳ್ಳಿ ಗ್ರಾಮದಲ್ಲಿ ಒಂದೇ ಕೋಮಿಗೆ ಸೇರಿದ ದಾಯಾದಿಗಳಾದ ಗೋಂವಿಂದರೆಡ್ಡಿ ಹಾಗೂ ವಿಜಯ್‌ಕುಮಾರ್ ಎಂಬವರಿಗೆ ಕಳೆದ ಹಲವು ದಿನಗಳಿಂದ ಭೂವಿವಾದ ಹಿನ್ನೆಲೆಯಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ಇದೇ ವಿಚಾರವಾಗಿ ಕೈ ಕೈ ಮಿಲಾಯಿಸಿದ ಪರಿಣಾಮ ಗೋವಿಂದರೆಡ್ಡಿ, ವಿಜಯ್‌ಕುಮಾರ್ ಹಾಗೂ ರವಿಕುಮಾರ್ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಟ್ಲಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಹಾವು ಕಚ್ಚಿ ವ್ಯಕ್ತಿ ಸಾವು
ಚಿಂತಾಮಣಿ: ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿಷಪೂರಿತ ಹಾವೊಂದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಪೆದ್ದೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಂಜಪ್ಪ(50) ಎಂಬ ರೈತ ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿಷಪೂರಿತ ಘಟನೆ ನಡೆದಿದ್ದು, ತಕ್ಷಣ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಿಲ್ಲ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ; ಬೈಕ್ ಸವಾರ ಸಾವು
ಬಂಗಾರಪೇಟೆ: ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ತಾಲೂಕಿನ ಕುಪ್ಪನಹಳ್ಳಿ ಗ್ರಾಮದ ಮುನಿರಾಜು (26) ಎಂದು ಗುರುತಿಸಲಾಗಿದೆ.
ಅಪಘಾದಲ್ಲಿ ಇಬ್ಬರಿಗೆ ಗಾಯ
ಅಪಘಾತ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರನಿಗೆ ಕಾಲು ಮುರಿದು, ಸವಾರನಿಗೆ ಗಾಯಗಳಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ತಾಲ್ಲೂಕಿನ ಬ್ಯಾಡಬೆಲೆ ಗ್ರಾಮದ ದ್ವಾರಕೇಶ್ ಅವರ ಕಾಲು ಮುರಿದಿದ್ದು, ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೆ ಗ್ರಾಮದ ಅಮರೇಶ್ ಅವರ ತಲೆಗೆ ಪೆಟ್ಟಾಗಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನರೇಗಾ ಹಣ ಬಿಡುಗಡೆಗೆ ಆಗ್ರಹ
ಕೋಲಾರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ನಡೆಸಿರುವ ಕೂಲಿಕಾರರಿಗೆ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘದ ವತಿಯಿಂದ ಜಿಪಂ ಸಿಇಒ ವಿನೋತ್ ಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ನರೇಗಾ ಯೋಜನೆಯಡಿಯಲ್ಲಿ ಕೋಲಾರ ತಾಲೂಕಿನ ಮದನಹಳ್ಳಿ, ತೊಟ್ಲಿ, ಷಾಪೂರು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ತಿಂಗಳು ಕೆಲಸ ಮಾಡಲಾಗಿದ್ದು, ಈವರೆವಿಗೂ ಕೂಲಿ ಹಣವನ್ನು ನೀಡಿಲ್ಲವೆಂದು ಮುಖಂಡರು ದೂರಿದರು.
ಈ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ 15 ದಿನದ ಒಳಗಾಗಿ ಕೂಲಿ ಹಣವನ್ನು ನೀಡಬೇಕಾಗಿದ್ದು, ಇದುವರೆಗೂ ಗ್ರಾಪಂ ಬಿಲ್ ಪಾವತಿ ಮಾಡದ ಕಾರಣ ಬಡ ಕೂಲಿ ಕಾರ್ಮಿಕರು ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ತಾಲೂಕು ಅಧ್ಯಕ್ಷ ಕುರ್ಕಿದೇವರಾಜ್, ಉಪಾಧ್ಯಕ್ಷೆ ಗಂಗಮ್ಮ, ಸಹ ಕಾರ್ಯದರ್ಶಿ ಎನ್.ಎಂ. ಶ್ರೀರಾಮ್, ವಿ.ನಾರಾಯಣರೆಡ್ಡಿ, ಅಪ್ಪಯ್ಯಣ್ಣ, ಬಿ.ಸಿ. ರಾಮರೆಡ್ಡಿ, ಮಂಜುಳ, ಮುನಿರಾಜು ಇದ್ದರು.