ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕೆರೆಗಳು

Mainashree
Updated On : 20 Mar 2014, 12:30 pm

ಬಂಗಾರಪೇಟೆ: ಕೆರೆಗಳ ತವರೂರಾದ ತಾಲೂಕಿನಲ್ಲಿ ಬರದ ಹಿನ್ನಲೆಯಲ್ಲಿ ಕೆರೆಗಳು ಅಸ್ಥಿತ್ವ ಕಳೆದುಕೊಳ್ಳುವ ಹಂತದಲ್ಲಿದ್ದರೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮೌನಕ್ಕೆ ಶರಣಾಗಿರುವುದು ನಾಗರಿಕರನ್ನು ಆತಂಕಗೊಳ್ಳುವಂತೆ ಮಾಡಿದೆ.
ತಾಲೂಕಿನ ಕೆರೆಗಳಲ್ಲಿ ದುರ್ವಾಸನೆ ಬಡಿಯುವುದು, ಹಳೆ ಕಟ್ಟಡಗಳ ಮಣ್ಣು, ಇಟ್ಟಿಗೆ ರಾಶಿ, ಮಾಂಸದಂಗಡಿಗಳ ತ್ಯಾಜ್ಯ, ಕುಗ್ಗುತ್ತಿರುವ ಕೆರೆಯಂಗಳದ ವಿಸ್ತೀರ್ಣ ಕಣ್ಣಿಗೆ ರಾಚುತ್ತದೆ. ಪಟ್ಟಣದ ದೊಡ್ಡಕೆರೆ ಈಗಾಗಲೇ ತನ್ನ ಅಸ್ಥಿತ್ವ ಕಳೆದುಕೊಂಡು ಹಲವು ದಶಕಗಳೇ ಕಳೆದಿದೆ. ಇದನ್ನು ಉಳಿಸಲು ನಾಗರಿಕರು ಸತತ ಹೋರಾಟ ಮಾಡಿದರು ಉಪಯೋಗವಾಗಿಲ್ಲ.
ಪಟ್ಟಣಕ್ಕೆ ಅಂಟಿಕೊಂಡಿರುವ ಹುಣಸನಹಳ್ಳಿ ಕೆರೆ ಈಗ ಅವಸಾನದ ಅಂಚಿನಲ್ಲಿದೆ. ಚಿಕನ್ ಅಂಗಡಿಗಳಲ್ಲಿ ಕಡಿದ ಕೋಳಿಯ ರೆಕ್ಕೆ, ಪುಕ್ಕ, ತ್ಯಾಜ್ಯ ಇಲ್ಲಿ ಸುರಿಯಲಾಗುತ್ತಿದೆ. ಸಮಾರಂಭಗಳಲ್ಲಿ ಔತಣಕ್ಕಾಗಿ ಬಳಸುವ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲಿ ಎಸೆಯಲಾಗಿದೆ. ಅಲ್ಲದೆ ಕೆರೆಯಂಚಿನಲ್ಲಿ ಹತ್ತಾರು ಮಾಂಸದ ಅಂಗಡಿಗಳು ತಲೆ ಎತ್ತಿದ್ದು, ತ್ಯಾಜ್ಯ ಎಸೆಯಲು ಬಳಸುತ್ತಿರುವ ಕಸದ ತೊಟ್ಟಿಯಾಗಿ ಕೆರೆಯಂಗಳ ಬಳಕೆಯಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರ ಕೆರೆಗಳ ಹೂಳು ತೆಗೆಯುವ ಕೆಲಸಕ್ಕೆ ಮುಂದಾಗಿದೆ. ಆದರೆ ಇಲ್ಲಿನ ಕೆರೆಯಲ್ಲಿ ಟ್ರ್ಯಾಕ್ಟರ್‌ಗಟ್ಟಲೆ ಬಳಸಿದ ಮಣ್ಣು, ಇಟ್ಟಿಗೆ ಸುರಿದು ಕೆರೆ ಮುಚ್ಚುವ ಪ್ರಕ್ರಿಯೆ ನಡೆದಿದೆ. ಆಗಾಗ ಇಂಥ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಆದರೂ ಗ್ರಾಮಸ್ಥರಾಗಲಿ ಅಥವಾ ಪಂಚಾಯಿತಿ ಅಧಿಕಾರಿಗಳಾಗಲಿ ತಡೆಯುವ ಕ್ರಮ ಕೈಗೊಂಡಿಲ್ಲ.
ಹಿಂದೆ ಸಾಮಾಜಿಕ ನಿಯಂತ್ರಣ ಇತ್ತು. ಸಾರ್ವಜನಿಕ ಆಸ್ತಿಗಳೆನಿಸಿದ ರಸ್ತೆ, ಕೆರೆ, ಉದ್ಯಾನದ ರಕ್ಷಣೆ ಬಗ್ಗೆ ಹಿರಿಯರು, ಮುಖಂಡರು ಕಾಳಜಿ ವಹಿಸಿದ್ದರು. ಮೂರ್ನಾಲ್ಕು ವರ್ಷಕ್ಕೆ ಒಂದು ಬಾರಿ ಗ್ರಾಮಸ್ಥರೇ ಕೆರೆ ಹೂಳು ತೆಗೆದು ನೀರಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತಿದ್ದರು.
ಬದಲಾದ ಸನ್ನಿವೇಶದಲ್ಲಿ ಜನರಲ್ಲಿ ಸಾಮಾಜಿಕ ಬದ್ಧತೆ ಕ್ಷೀಣಿಸಿದೆ. ಎಲ್ಲದಕ್ಕೂ ಸರ್ಕಾರವನ್ನು ದೂಷಿಸುವ ಮನೋಭಾವ ಮೂಡಿದೆ. ಇದರಿಂದ ಸಾರ್ವಜನಿಕ ಆಸ್ತಿಗೆ ರಕ್ಷಣೆ ಇಲ್ಲದಾಗಿದೆ.  
ಸುಮಾರು 9 ವರ್ಷಗಳಿಂದ ಮಳೆ ಇಲ್ಲದ ಕಾರಣ ಕೆರೆ ಬರಿದಾಗಿದೆ. ಪರಿಣಾಮ ಕೆರೆಯಂಗಳದಲ್ಲಿ ಮುಳ್ಳು ಗಿಡ, ಮರಗಳು ಬೆಳೆದು ನಿಂತಿವೆ.  
40 ಎಕರೆಗಿಂತ ವಿಸ್ತೀರ್ಣವಾಗಿರುವ ಕೆರೆಯಂಗಳ ಒತ್ತುವರಿಯಾಗಿದೆ. ಇದರಿಂದ ಕೆರೆ ವಿಸ್ತೀರ್ಣ ಗಣನೀಯವಾಗಿ ಕುಗ್ಗಿದೆ. ಕೆರೆಕೋಡಿ ಕೂಡ ಒತ್ತುವರಿಯಾಗಿದೆ. ಈ ವಿಷಯದ ಬಗ್ಗೆ ಈ ಹಿಂದಿನ ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿತ್ತಾದರೂ ಯಾವುದೆ ಪ್ರಯೋಜನ ಆಗಿಲ್ಲ ಎನ್ನುವುದು ಹುಣಸನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಅವರ ಆರೋಪ. ಪಟ್ಟಣದ ಹೊರವಲಯದ ದೇಶಹಳ್ಳಿ ಕೆರೆ, ಕೀಲುಕುಪ್ಪಕೆರೆ ಕೂಡ ಇದಕ್ಕೆ ಬಿನ್ನವಾಗಿಲ್ಲ. ಪಟ್ಟಣದ ಅಕ್ಕಿಗಿರಣಿಗಳ ತ್ಯಾಜ್ಯವನ್ನು ಅಲ್ಲಿ ಸುರಿಯಲಾಗಿದೆ. ಬಟ್ಟಲಿನಂತಿದ್ದ ಕೆರೆಗಳು ತಟ್ಟೆ ಆಕಾರ ತಾಳುತ್ತಿವೆ. ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆಗಳು ಕೆಲವೆಡೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಇನ್ನೂ ಕೆಲವೆಡೆ ಒತ್ತುವರಿ ನಡೆಯುತ್ತಿದೆ.
ಗ್ರಾಮಸ್ಥರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆರೆಯಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟುವಂತೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಹಸೀಲ್ದಾರ್ ಎಸ್.ಆರ್. ಉಷಾ ತಿಳಿಸಿದರು.

ಕೆ. ರಮೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement