ಆಡಳಿತದಲ್ಲಿ ಗಂಡಂದಿರ ದರ್ಬಾರ್ ನಿಲ್ಲಲಿ
ಚಿಕ್ಕಬಳ್ಳಾಪುರ: ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಎರಡನ್ನೂ ಮಹಿಳೆಯರು ದಕ್ಕಿಸಿಕೊಂಡಿರುವುದು ಸಂತಸದ ವಿಷಯ. ಆದರೆ, ಮಹಿಳೆಯರ ಹೆಸರಿನಲ್ಲಿ ಗಂಡಂದಿರ ದರ್ಬಾರ್ ನಡೆಯದಿರಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಶೋಷಣೆ, ಕಿರುಕುಳ, ಅನ್ಯಾಯ, ದೌರ್ಜನ್ಯದಿಂದ ಮಹಿಳೆ ಮುಕ್ತಳಾಗಬೇಕು. ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂಬ ಭಾವನೆಯಲ್ಲಿ ಕಾನೂನುಗಳನ್ನು ಜಾರಿಗೆಗೆ ತರಲಾಗುತ್ತಿದೆ. ಹಾಗೆಯೇ ಹೊಸ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸಮಾಜದ ಸವಾಂವಾಂಗೀಣ ಅಭಿವೃದ್ಧಿಗೆ ಶ್ರಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಆದರೆ, ಮಹಿಳೆಯರು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿ ಪುರುಷರೇ ಆಡಳಿತದಲ್ಲಿ ಕೈ ಹಾಕುವ ಘಟನೆಗಳೂ ಇಂದಿಗೂ ನಡೆಯುತ್ತಿರುವುದು ದುರಾದೃಷ್ಟಕರ. ಇದು ಇಲ್ಲೂ ನಡೆಯದಿರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.