ಕೃಷ್ಣಯ್ಯಶೆಟ್ಟಿ ಬಿಜೆಪಿ ಮರು ಸೇರ್ಪಡೆಗೆ ತೀರ್ಮಾನ
ಮಾಲೂರು: ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿರನ್ನು ಪಕ್ಷಕ್ಕೆ ಕರೆತರಲು ಬುಧವಾರ ಪಟ್ಟಣದಲ್ಲಿ ಕರೆದಿದ್ದ ಹೋಬಳಿ ಮಟ್ಟದ ಮುಖಂಡರ ಸಭೆಯಲ್ಲಿ ಗೊಂದಲದ ನಡುವೆ ತೀರ್ಮಾನ ಮಾಡಲಾಯಿತು.
ಇಲ್ಲಿನ ರೇಲ್ವೇ ಸೇತುವೆ ಬಳಿಯ ಶ್ರೀ ಸಾಯಿ ಕನ್ವೆನ್ಷನ್ಹಾಲ್ನಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಾಲೂಕು, ಗ್ರಾಪಂ ಸದಸ್ಯರು ಹಾಗೂ ಹೋಬಳಿ-ಬೂತ್ ಮಟ್ಟದ ಮುಖಂಡರು ಮಾಜಿ ಶಾಸಕರನ್ನು ಪಕ್ಷಕ್ಕೆ ಕರೆ ತರಲು ಒಮ್ಮತದ ಒಪ್ಪಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಲೋಕೇಶ್, ತಾಲೂಕಿನಲ್ಲಿ ಬಿಜೆಪಿಯನ್ನು ಕಳೆದ ಹತ್ತು ವರ್ಷಗಳಲ್ಲಿ ಕಟ್ಟಿ ಬೆಳೆಸಿದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ರವರ ಸೇವೆ ಪಕ್ಷಕ್ಕೆ ಅವಶ್ಯವಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಲು ಹಾಗೂ ಕಳೆದ ಮೂರು ದಶಕಗಳಿಂದ ಕೋಟೆ ಕಟ್ಟಿಕೊಂಡಿರುವ ಕೇಂದ್ರ ಸಚಿವರನ್ನು ಸೋಲಿಸಬೇಕಾದರೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಬೆಂಬಲ ಬೇಕು ಎಂದರು. ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಪಕ್ಷದ ಇತರೆ ನಾಯಕರನ್ನು ಬೆಳೆಯುವುದಕ್ಕೂ ಬಿಡದ ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪ ಇತರೆ ಪಕ್ಷದ ಮುಖಂಡರ ದಾರಿ ತಪ್ಪಿಸಿ ಪಕ್ಷವನ್ನು ಹೋಳು ಮಾಡುವುದರಲ್ಲಿ ಸಿದ್ಧ ಹಸ್ತರು ಎಂದರು. ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಷಕ್ಕೆ ಕರೆ ತರುವಾಗ ಬಿಜೆಪಿ ರಾಜ್ಯ ಮಟ್ಟದ ನಾಯಕರು ಕೆರಯಬೇಕು. ಇದಕ್ಕಾಗಿ ತಾಲೂಕು-ಜಿಲ್ಲಾ ಅಧ್ಯಕ್ಷರು ಸೇರಿದಂತೆ ಬಿಜೆಪಿಯಿಂದ ಗೆದ್ದಿರುವ ಎಲ್ಲ ಹಂತದ ಜನಪ್ರತಿನಿಧಿಗಳು ಬೆಂಗಳೂರಿಗೆ ತೆರಳಿ ರಾಜ್ಯ ಮಟ್ಟದ ನಾಯಕರನ್ನು ಭೇಟಿ ಮಾಡಿ ಇಲ್ಲಿನ ಸ್ಥಿತಿಯನ್ನು ತಿಳಿಸಬೇಕು ಎಂದರು.
ಮೊದಲು ಕೃಷ್ಣಯ್ಯ ಶೆಟ್ಟಿ ಪಕ್ಷಕ್ಕೆ ಬರುವ ಬಗ್ಗೆ ತಿಳಿಸಿದರೆ ಮುಂದಿನ ಮಾತು ಕತೆ ನಡೆಸಬಹುದು ಎಂದು ತಾಲೂಕು ಅಧ್ಯಕ್ಷ ವೆಂಕಟೇಶ್ ಹೇಳಿದಾಗ ಸಭೆಯಲ್ಲಿ ಗೊಂದಲವುಂಟಾಯಿತು.ಅಧ್ಯಕ್ಷರ ಈ ಮಾತಿಗೆ ಅಕ್ಷೇಪಣೆ ವ್ಯಕ್ತ ಪಡಿಸಿದ ಕಾರ್ಯಕರ್ತರು ಈ ಹಿಂದೆ ಬಿಜೆಪಿ ಬಾವುಟ ಹಿಡಿಯುವರೇ ಇಲ್ಲದಾಗ ಬಂದ ಕೃಷ್ಣಯ್ಯ ಶೆಟ್ಟಿ ಜನಪ್ರತಿನಿಧಿಗಳ ಎಲ್ಲ ಹಂತಗಳಲ್ಲಿ ಕಮಲ ಅರಳಿಸಿರುವಾಗ ಅವರ ಬಗ್ಗೆ ತಾತ್ಸಾರವಾಗಿ ಮಾತನಾಡುವುದು ಸರಿಯಲ್ಲ ಎಂದರು. ಹಿರಿಯ ಸದಸ್ಯ ಸುಬ್ರಮಣ್ಯರೆಡ್ಡಿ ಮಧ್ಯೆ ಪ್ರವೇಶಿಸಿ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರು ಪಕ್ಷಕ್ಕೆ ಬಂದರೆ ಪಕ್ಷಕ್ಕೆ ಆನೆ ಬಲ ಬರುವುದರಿಂದ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ತಾಲೂಕಿನ ಮುಖಂಡರು ಸೇರಿ ರಾಜ್ಯ ನಾಯಕರನ್ನು ಶೀಘ್ರವಾಗಿ ಭೇಟಿ ಮರು ಸೇರ್ಪೆಡೆಗೆ ಒತ್ತಾಯಿಸಬೇಕು ಎಂಬ ಮಾತಿಗೆ ಸಭೆ ಒಪ್ಪಿಗೆ ಸೂಚಿಸಿತು. ತಾಪಂ ಸದಸ್ಯ ಚಂದ್ರಪ್ಪ, ಕೃಷ್ಣಪ್ಪ, ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ, ದೇವರಾಜ್ ರೆಡ್ಡಿ, ಯುವಮೋರ್ಚಾ ಅಧ್ಯಕ್ಷ ಅಪ್ಪಿ,ನಾರಾಯಣಸ್ವಾಮಿ, ಬೋರ್ ರಮೇಶ್, ವೆಂಕಟಾಚಲಪತಿ, ಬಿಜೆಪಿ ನಾರಾಯಣಸ್ವಾಮಿ, ರಾಜಪ್ಪ, ಷಮ್ಮುಖ, ಆರಾಧ್ಯ ಇದ್ದರು.