ಕೇಂದ್ರ ಸಚಿವರ ನಾಮಪತ್ರ ಸಲ್ಲಿಕೆ
ಕೋಲಾರ: ಏಪ್ರಿಲ್ 17ರಂದು ನಡೆಯುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕೋಲಾರ ಮೀಸಲು ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಚುನಾವಣೆಗಾಗಿ ಬುಧವಾರ ಆಧಿಸೂಚನೆ ಪ್ರಕಟಗೊಂಡಿದ್ದು ಮೊದಲ ದಿನವೇ ಕೆ.ಎಚ್. ಮುನಿಯಪ್ಪನವರು ಉಮೇದುವಾರಿಕೆ ಸಲ್ಲಿಸುವ ಮೂಲಕ ಪ್ರಚಾರಕ್ಕೂ ಚಾಲನೆ ನೀಡಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಅವರು ತಮ್ಮ ಪತ್ನಿ ನಾಗರತ್ನಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಅಪ್ತ ಮುಖಂಡರೊಂದಿಗೆ ಮುಳಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ದೇವಾಲಯಕ್ಕೆ ತೆರಳಿ ಗಣಪನಿಗೆ ಪೂಜಿಸಿ ನಂತರ ಮುಳಬಾಗಿಲು ಪಟ್ಟಣದ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆದು, ದರ್ಗಾಕ್ಕೆ ಭೇಟಿ ನೀಡಿದ ನಂತರ ಕೋಲಾರಕ್ಕೆ ಆಗಮಿಸಿ ಶಿರಡಿ ಸಾಯಿ ಬಾಬಾ ಮಂದಿರ, ಕೋಲಾರಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು.
10.30ಕ್ಕೆ ತಮ್ಮ ಪತ್ನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಹಾಗೂ ವಕೀಲ ವಾಸುದೇವಮೂರ್ತಿಯವರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಮೊದಲ ನಾಮಪತ್ರವನ್ನು 11.55ಕ್ಕೆ ಚುನಾವಣಾಧಿಕಾರಿ ಡಿ.ಕೆ. ರವಿಯವರಿಗೆ ಸಲ್ಲಿಸಿ, ನಂತರ ಮತ್ತೊಂದು ನಾಮಪತ್ರವನ್ನು 12.10ಕ್ಕೆ ನೀಡಿದರು.
ನಾಮಪತ್ರಕ್ಕೆ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಹಾಗೂ ಕಾಂಗ್ರೆಸ್ ಮುಖಂಡ ಕುಮಾರ್ ಸೂಚಕರು ಮತ್ತು ಅನುಮೋದಕರಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು 12,500 ರು.ಠೇವಣಿಯನ್ನು ಪಾವತಿಸಿ ರಸೀದಿ ಪಡೆದ ಬಳಿಕ ನಾಮಪತ್ರವನ್ನು ನಿಯಾಮಾನುಸಾರ ಸಲ್ಲಿಸಿರುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.