ಗುಡಿಬಂಡೆ: ಜೆಡಿಎಸ್ ಸದಸ್ಯನಿಗೆ ಪಪಂ ಅಧ್ಯಕ್ಷಗಿರಿ
ಗುಡಿಬಂಡೆ: ಸ್ಥಳೀಯ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ನ ರಿಯಾಜ್ ಪಾಷ ಮತ್ತು ಉಪಾಧ್ಯಕ್ಷರಾಗಿ ಕೆಜೆಪಿಯಿಂದ ಆಯ್ಕೆಯಾಗಿದ್ದ ರಾಜಣ್ಣ ಅಯ್ಕೆಯಾಗಿದ್ದಾರೆ.
ಬಿಸಿಎಮ್ ಎಗೆ ಮೀಸಲಾಗಿದ್ದ ಅಧ್ಯಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ನಿಗಧಿಯಾಗಿದ್ದ ಉಪಾಧ್ಯಕ್ಷ ಸ್ಥಾನಗಳನ್ನು ಗಿಟ್ಟಿಸಲು ಕಾಂಗ್ರೆಸ್, ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳಿಂದ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 11ಸ್ಥಾನಗಳನ್ನು ಹೊಂದಿರುವ ಪಪಂನಲ್ಲಿ ಕಾಂಗ್ರೆಸ್-5, ಜೆಡಿಎಸ್-3, ಕೆಜೆಪಿ-2 ಮತ್ತು ಒಬ್ಬ ಪಕ್ಷೇತರ ಬಲವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇಬ್ಬರು ಸದಸ್ಯರ ಬೆಂಬಲ ಅಗತ್ಯವಿತ್ತು. ಇದನ್ನು ಮನ ಗಂಡ ಜೆಡಿಎಸ್ ಇತರೆ ಪಕ್ಷಗಳ ಜೊತೆಗೂಡಿ ಅಧಿಕಾರ ಹಿಡಿಯಲು ಕಾರ್ಯ ತಂತ್ರ ರೂಪಿಸಿತ್ತು. ಈ ನಿಟ್ಟಿನಲ್ಲಿ ಪ್ರವಾಸದ ನೆಪದಲ್ಲಿ ಆರು ಮಂದಿ ಸದಸ್ಯರನ್ನು ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಕರೆದೊಯ್ದು ಚುನಾವಣೆ ನಡೆಯುವ ದಿನ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಜೊತೆ ಪ್ರತ್ಯಕ್ಷವಾದರು.
ತಾವು ಶಾಸಕ ಸುಬ್ಬಾರೆಡ್ಡಿ ಬಣಕ್ಕೆ ಸೇರ್ಪಡೆಯಾಗಿದ್ದು, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು. ನಂತರ ಪ್ರಾರಂಭವಾದ ಚುನಾವಣೆ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ ಸದಸ್ಯ ಜೆಡಿಎಸ್ನ ರಿಯಾಜ್ ಪಾಷ, ಅಧ್ಯಕ್ಷ ಸ್ಥಾನಕ್ಕೆ ಹಾಗೂ 1ನೇ ವಾರ್ಡಿನ ಕೆಜೆಪಿ ಸದಸ್ಯ ರಾಜಣ್ಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರ ವಿರುದ್ಧ ಕಾಂಗ್ರೆಸ್ ಸೇರಿದಂತೆ ಯಾವ ಸದಸ್ಯರೂ ನಾಮ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಕಾರಿಯಾಗಿದ್ದ ತಹಸೀಲ್ದಾರ್ ಶೈಲಜಾ ಇವರಿಬ್ಬರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು.
ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಬಗ್ಗೆ ಚುನಾಯಿತ ಕಾಂಗ್ರೆಸ್ ಸದಸ್ಯರು ಮಾತನಾಡಿ, ಶಾಸಕ ಸುಬ್ಬಾರೆಡ್ಡಿ ಶೀಘ್ರದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಈಗ ಪಪಂನಲ್ಲಿ ಅಧಿಕಾರ ಹಿಡಿದಿರುವ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಅವರ ಬೆಂಬಲಿಗರು ಶಾಸಕರ ಜೊತೆ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವಿರೋಧ ಆಯ್ಕೆಗೆ ಸಮ್ಮತಿಸಲಾಯಿತೆಂದು ಸದಸ್ಯರಾದ ಲಕ್ಷ್ಮೀಕಾಂತಮ್ಮ, ಜಬೀನ್ ತಾಜ್, ರಮೇಶ್, ಚಂದ್ರಶೇಖರ್ ತಿಳಿಸಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಮುಖ್ಯಾಧಿಕಾರಿ ಶ್ರೀ ರಾಮರೆಡ್ಡಿ ಹಾಗೂ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.