ನಗರಸಭೆ ಕೈ ವಶ
ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆ ಅಧ್ಯಕ್ಷರಾಗಿ 29 ನೇ ವಾರ್ಡಿನ ಸದಸ್ಯೆ (ಕಾಂಗ್ರೆಸ್) ಲೀಲಾವತಿ ಮತ್ತು ಉಪಾಧ್ಯಕ್ಷರಾಗಿ 21 ನೇ ವಾರ್ಡಿನ ಸದಸ್ಯೆ(ಪಕ್ಷೇತರ) ಜಬೀನ್ ತಾಜ್ ಆಯ್ಕೆಯಾಗಿದ್ದು, ಈ ಮೂಲಕ ಎರಡು ಸ್ಥಾನಗಳನ್ನು ಮಹಿಳಾ ಮಣಿಗಳೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಂತಾಗಿದೆ.
ಪಕ್ಷೇತರ ಸದಸ್ಯರೆಲ್ಲರೂ ಕಾಂಗ್ರೆಸ್ ಪಕ್ಷದ ಕೈ ಹಿಡಿದ ಕಾರಣ ಜೆಡಿಎಸ್ಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ. ನಗರಸಭಾ ಕಚೇರಿ ಸಭಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ಉಪ ವಿಭಾಗಾಧಿಕಾರಿಗಳು, ಚುನಾವಣಾಧಿಕಾರಿಗಳಾಗಿರುವ ಶಾಂತಲಾ ಚುನಾವಣಾ ಪ್ರಕ್ರಿಯೆ ಶುರು ಮಾಡಿದರು. ಕಾಂಗ್ರೆಸ್ 9, ಪಕ್ಷೇತರ 11 ಮತ್ತು ಶಾಸಕ ಕೆ. ಸುಧಾಕರ್ ಜೊತೆಗೂಡಿ ಬಂದರೆ, ಉಳಿದಂತೆ ಜೆಡಿಎಸ್ 10 ಮಂದಿ ಸದಸ್ಯರು ಹಾಜರಾದರು.
ಕಾಂಗ್ರೆಸ್ ಪರ ಲೀಲಾವತಿ, ಜೆಡಿಎಸ್ ಪರ 1 ನೇ ವಾರ್ಡಿನ ಸದಸ್ಯ ಕೇಶವಕುಮಾರ್, 8ನೇ ವಾರ್ಡಿನ ಸದಸ್ಯೆ ಪಿ. ಶ್ರೀನಿವಾಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಜಬೀನ್ ತಾಜ್, ಜೆಡಿಎಸ್ ಪರ 16 ನೇ ವಾರ್ಡಿನ ಸದಸ್ಯೆ ನಾಗರತ್ನ ನಾಮಪತ್ರ ಸಲ್ಲಿಸಿದರು.
ಆದರೆ, ಕೊನೆಯ ಗಳಿಗೆಯಲ್ಲಿ ಪಿ. ಶ್ರೀನಿವಾಸ್ ನಾಮಪತ್ರ ವಾಪಸ್ ಪಡೆದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೀಲಾವತಿ 22, ಕೇಶವ್ ಕುಮಾರ್ 10, ಉಪಾಧ್ಯಕ್ಷರ ಆಯ್ಕೆಯಲ್ಲಿ ಜಬೀನ್ ತಾಜ್ 22 ಮತ್ತು ನಾಗರತ್ನ 10 ಮತ ಪಡೆದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಲೀಲಾವತಿ ಮತ್ತು ಉಪಾಧ್ಯಕ್ಷರಾಗಿ ಜಬೀನ್ ತಾಜ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಾಂತಲಾ ಘೋಷಿಸಿದರು.
ನಗರಸಭೆಯ 31 ಸದಸ್ಯರು ಮತ್ತು ಶಾಸಕರು ಸೇರಿದಂತೆ ಒಟ್ಟು 32 ಮತಗಳು ಚಲಾವಣೆಯಾದವು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಮತ ಚಲಾಯಿಸದಂತೆ ತಮಗೆ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರ ವಿರುದ್ಧ ಹಿರಿಯ ನ್ಯಾಯಾಲಯಕ್ಕೆ ಹೋಗಿ ಆ ತೀರ್ಪಿಗೆ ತಡೆಯಾಜ್ಞೆ ತಂದು 30 ನೇ ವಾರ್ಡಿನ ಸದಸ್ಯ ಎನ್. ಶ್ರೀನಿವಾಸ್ ಮತ ಚಲಾಯಿಸಿದರು. ಚುನಾವಣೆಗೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಕಚೇರಿ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷೆ ಲೀಲಾವತಿ ಮಾತನಾಡಿ, ನಗರದಲ್ಲಿರುವ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸುವ ಸಲುವಾಗಿ ಶ್ರಮಿಸುತ್ತೇನೆ. ಪ್ರಮುಖವಾಗಿ ಕುಡಿಯುವ ನೀರು, ರಸ್ತೆಕಾಮಗಾರಿ, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಲು ಆದ್ಯತೆ ನೀಡುತ್ತೇನೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಶಾಸಕ ಡಾ.ಕೆ. ಸುಧಾಕರ್, ಕೆ.ವಿ. ನವೀನ್ ಕಿರಣ್, ಹಿರಿಯ ಸದಸ್ಯ ಮಹಮದ್ ರಫಿಕ್ ಇದ್ದರು.