ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪ ರು. 2ಕೋಟಿ ಸಾಲಗಾರರಂತೆ

Mainashree
Updated On : 20 Mar 2014, 12:36 pm

ಕೋಲಾರ: ಏಳನೇ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ 225.82 ಲಕ್ಷ ರು. ಬ್ಯಾಂಕ್ ಸಾಲ ಪಡೆದಿದ್ದಾರಂತೆ.
ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದ ಕೆ.ಎಚ್. ಮುನಿಯಪ್ಪ ತಾವು ಸಲ್ಲಿಸಿರುವ ಆಸ್ತಿ ಮತ್ತು ಇನ್ನಿತರ ವಿವರಗಳಲ್ಲಿ ಕಳೆದ ವರ್ಷದ ಅವರ ಆದಾಯ 23,15,190 ಎಂದು ಪ್ರಮಾಣೀಕರಿಸಿದ್ದಾರೆ.
ಮುನಿಯಪ್ಪನವರ ಪತ್ನಿ ಎಂ. ನಾಗರತ್ನಮ್ಮನವರ ಆದಾಯ 50,87,704 ರು.ಗಳಾಗಿದ್ದು ಪತ್ನಿಗಿಂತ 27,72,514 ರು. ಕಡಿಮೆ ಆದಾಯವನ್ನು ತೋರಿಸಿದ್ದಾರೆ.    
ಮುನಿಯಪ್ಪ ಬಳಿ 28.78 ಲಕ್ಷ ರು. ನಗದು, ಪತ್ನಿ ನಾಗರತ್ನಮ್ಮ ಬಳಿ 1.7 ಲಕ್ಷ ರು. ನಗದು ಇದೆ. ಎಸ್.ಬಿ. ಖಾತೆಯಲ್ಲಿ 6.50 ಲಕ್ಷ ರು., ಮತ್ತು ಅವರ ಪತ್ನಿ 10 ಸಾವಿರ ರು. ಹೊಂದಿದ್ದಾರೆ.
ಪತ್ನಿ ನಾಗರತ್ನಮ್ಮ ನಟರಾಜ ಎಂಟರ್ ಪ್ರೈಸಸ್‌ನಲ್ಲಿ 97.64 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ. ಮುನಿಯಪ್ಪ 30ಸಾವಿರ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಮತ್ತು 2.22 ಲಕ್ಷ ರು. ಪಿಪಿಎಫ್ ಹಣ ಹೂಡಿಕೆ ಮಾಡಿದ್ದಾರೆ. ಅವರ ಪತ್ನಿ ನಾಗರತ್ನಮ್ಮ 1.25 ಲಕ್ಷ ರು. ಎಲ್‌ಐಸಿಯಲ್ಲಿ ಹಾಗೂ 1.25 ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ದರೆ. ನಾಗರತ್ನಮ್ಮ 14.14 ಲಕ್ಷ ರು.ಗಳನ್ನು ಮುನಿಯಪ್ಪನವರಿಗೆ ಸಾಲ ನೀಡಿದ್ದಾರೆ.
ಮುನಿಯಪ್ಪ ಬಳಿ 2.63ಲಕ್ಷ ರು. ಮೌಲ್ಯದ ಫೋರ್ಡ್ ಐಕಾನ್ ಕಾರ್ ಇದೆ. ನಾಗರತ್ನಮ್ಮ 750 ಗ್ರಾಂ. ಚಿನ್ನ, 5 ಕೆ.ಜಿ ಬೆಳ್ಳಿ ಆಭರಣಗಳನ್ನು ಹೊಂದಿರುತ್ತಾರೆ.  ಇದರ ಮಾರುಕಟ್ಟೆ ಮೌಲ್ಯ 23.50 ಲಕ್ಷ ರು. ಆಗಿದೆ. ಮಗಳು ನಿರ್ಮಲ ಬಳಿ 200 ಗ್ರಾಂ. ಚಿನ್ನ ಇದ್ದು ಇದರ ಮಾರುಕಟ್ಟೆ ಮೌಲ್ಯ 5.60ಲಕ್ಷ ರು. ಆಗಿದೆ.
ಮುನಿಯಪ್ಪ ಕಚೇರಿ ಸ್ಥಾಪಿಸಲು 41.54 ಲಕ್ಷ ರು. ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗೆ 4.35ಲಕ್ಷ ರು.ಹಣ ಹೂಡಿಕೆ ಮಾಡಿದ್ದಾರೆ. ಬಶೆಟ್ಟಿಹಳ್ಳಿ ಗ್ರಾಮದಲ್ಲಿ  ಸರ್ವೇ ನಂ. 164 ರಲ್ಲಿ 8 ಎಕರೆ 18 ಗುಂಟೆ ಕೃಷಿ ಭೂಮಿಯನ್ನು ಹೊಂದಿರುತ್ತಾರೆ. ಪತ್ನಿ ನಾಗರತ್ನಮ್ಮ ಗೋರಮಿಲಹಳ್ಳಿಯಲ್ಲಿ ಸರ್ವೇ ನಂ.35 ರಲ್ಲಿ 17 ಎಕರೆ 8 ಗುಂಟೆ ಕೃಷಿ ಭೂಮಿಯನ್ನು ಹೊಂದಿರುತ್ತಾರೆ. ಆ ಪೈಕಿ ಮುನಿಯಪ್ಪ 4 ಎಕರೆ 18 ಗುಂಟೆ ಪಿತ್ರಾರ್ಜಿತ ಮತ್ತು 4 ಎಕರೆ ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿಯನ್ನು ಹೊಂದಿರುತ್ತಾರೆ. ಮುನಿಯಪ್ಪನವರ ಕೃಷಿ ಜಮೀನಿನ ಮೌಲ್ಯ 40 ಲಕ್ಷ ರು. ಮತ್ತು ಅವರ ಪತ್ನಿ ನಾಗರತ್ನಮ್ಮ ಅವರ ಕೃಷಿ ಭೂಮಿಯ 85.4 ಲಕ್ಷ ರು. ಆಗಿದೆ.
ನಾಗರತ್ನಮ್ಮ ತಿಂಡ್ಲು ಗ್ರಾಮದಲ್ಲಿ 14 ಗುಂಟೆ ಕೃಷಿಯೇತರ ಭೂಮಿ ಹೊಂದಿದ್ದಾರೆ.  ಖರೀದಿಯ ಸಮಯದಲ್ಲಿ ಮಾರುಕಟ್ಟೆ ಮೌಲ್ಯ 7.58 ಲಕ್ಷ ರು. ಆಗಿದೆ.  ಪ್ರಸ್ತುತ ಮಾರುಕಟ್ಟೆ ಮೌಲ್ಯ 152.46 ಲಕ್ಷ ಆಗಿದೆ.  ಮುನಿಯಪ್ಪ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿ 10,000 ಚದರ ಅಡಿ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಅವರ ಪತ್ನಿ ನಾಗರತ್ನಮ್ಮ ಬೆಂಗಳೂರಿನ ಯಲಹಂಕದಲ್ಲಿ 2000 ಚದರ ಅಡಿ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಮುನಿಯಪ್ಪನವರು ಹೊಂದಿರುವ ವಾಣಿಜ್ಯ ಕಟ್ಟಡದ ಮೌಲ್ಯ 400 ಲಕ್ಷ ಆಗಿದೆ. ಅವರ ಪತ್ನಿ ನಾಗರತ್ನಮ್ಮ ಹೊಂದಿರುವ ವಾಣಿಜ್ಯ ಕಟ್ಟಡದ ಮೌಲ್ಯ 144 ಲಕ್ಷ ರು. ಆಗಿದೆ.
ಬೆಂಗಳೂರಿನ ಸಂಜಯ ನಗರ ಮತ್ತು ಸಹಕಾರಿ ನಗರದಲ್ಲಿ ನಾಗರತ್ನಮ್ಮ ವಾಸ ಯೋಗ್ಯ ಕಟ್ಟಡಗಳನ್ನು ಹೊಂದಿದ್ದಾರೆ.  ಮುನಿಯಪ್ಪ ಹೊಂದಿರುವ ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ 440 ಮತ್ತು ಅವರ ಪತ್ನಿ ನಾಗರತ್ನಮ್ಮ ಅವರ ಸ್ಥಿರಾಸ್ತಿಯ ಮೌಲ್ಯ 1111.86ಲಕ್ಷ ರು. ಆಗಿದೆ. ಮುನಿಯಪ್ಪ ಎಸ್.ಬಿ.ಎಂ. ಹಾಗೂ ಆಕ್ಸಿಸ್ ಬ್ಯಾಂಕ್‌ನಿಂದ 225.82 ಲಕ್ಷ ರು.ಮತ್ತು ಅವರ ಪತ್ನಿ ನಾಗರತ್ನಮ್ಮ 52.81 ಲಕ್ಷ ರು. ಸಾಲ ಹೊಂದಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿ ಅವರಿಗೆ ನೀಡಿರುವ ಆಸ್ತಿ ಮತ್ತು ಇನ್ನಿತರ ವಿವರಗಳಲ್ಲಿ ತಿಳಿಸಿದ್ದಾರೆ. ಮುನಿಯಪ್ಪ ಮತ್ತು ಪತ್ನಿ ನಾಗರತ್ನಮ್ಮ ನೀಡಿರುವ ಆಸ್ತಿ ವಿವರಗಳನ್ನು ಕೋಲಾರದ ವಕೀಲರು ಹಾಗೂ ನೋಟರಿಯವರಾದ ಎಂ. ರಾಮಲಿಂಗೇಗೌಡ ಅವರು ದೃಢೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement