ಮೋದಿ ಪ್ರಧಾನಿಯಾದರೆ ಶಾಶ್ವತ ನೀರಾವರಿ ಯೋಜನೆ ಜಾರಿ
ಶಿಡ್ಲಘಟ್ಟ: ನರೇಂದ್ರಮೋದಿ ಈ ದೇಶದ ಪ್ರಧಾನಿಯಾದರೆ ಬರಡು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಕನಸಿನಂತೆ ನೀರಾವರಿ ತಜ್ಞ ದಿ.ಡಾ. ಪರಮಶಿವಯ್ಯನವರ ಯೋಜನೆ ಜಾರಿಗೊಳಿಸುತ್ತಾರೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ದೇಶದಲ್ಲಿ 10 ವರ್ಷಗಳಲ್ಲಿ ನಡೆಸಿದ ದುರಾಡಳಿತದಿಂದಾಗಿ ದೇಶದ ಜನತೆ ಸಮರ್ಥ ನಾಯಕತ್ವವನ್ನು ಬಯಸಿದ್ದಾರೆ. ಆದ್ದರಿಂದ ಭಾಜಪ ಬೆಂಬಲಿಸಿ ಈ ಭಾಗದ ಜನತೆಯನ್ನು ಉಳಿಸಿ ಎಂದರು.
ಶಿಡ್ಲಘಟ್ಟ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷ ಹಾಗೂ ಭಾಜಪ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ದೇಶಕ್ಕೆ ಸಮರ್ಥ ನಾಯಕತ್ವ ನೀಡಬಲ್ಲ ವ್ಯಕ್ತಿ ನರೇಂದ್ರಮೋದಿ ಪ್ರಧಾನಿಯಾಗುವ ದಿನಗಳು ಹತ್ತಿರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಜನತೆ ಈ ಬಾರಿ ಭಾಜಪ ಅಭ್ಯರ್ಥಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಕಳೆದ ಆರು ಬಾರಿ ಸ್ಪರ್ಧಿಸಿ ವಿಜೇತರಾಗಿರುವ ಕೇಂದ್ರ ಸಚಿವರ ಕೊಡುಗೆ ಏನು? ಬರಗಾಲ ಪೀಡಿತ ಪ್ರದೇಶಗಳಾದ ಅವಳಿ ಜಿಲ್ಲೆಗಳಲ್ಲಿ ಜನತೆಗೆ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಲಿಲ್ಲ. ಈ ಕ್ಷೇತ್ರದ ಜನತೆಗೆ ಒಳಿತಾಗುವಂಥ ಯಾವುದೇ ಶಾಶ್ವತವಾದ ಕಾರ್ಯಕ್ರಮಗಳನ್ನು ಮಾಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.