ಇನ್ನೂ ಘೋಷಣೆಯಾಗದ ಜೆಡಿಎಸ್ ಅಭ್ಯರ್ಥಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸುವುದರ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಎಳೆಯುವ ಕಾರ್ಯ ಇನ್ನೂ ಎರಡು ದಿನಗಳ ಕಾಲ ಮುಂದಕ್ಕೆ ಹೋಗಿದೆ.
ಈ ಬಗ್ಗೆ ಮತ್ತೊಮ್ಮೆ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರ ಜೊತೆಗೆ ದೇವೇಗೌಡ ಮತ್ತು ಪಕ್ಷದ ಮುಖಂಡರೊಂದಿಗೆ ಚರ್ಚಿಸಲು ಎರಡು ದಿನ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ ಎಚ್.ಡಿ. ಕುಮಾರಸ್ವಾಮಿ, ಇಲ್ಲಿನ ಜನರ ಆಶಯಕ್ಕೆ ಸಕಾರತ್ಮಾಕವಾಗಿ ಸ್ಪಂದನೆ ಸಿಗುತ್ತದೆ. ನಾನು ಸಿಹಿ ಸುದ್ದಿಯನ್ನೇ ನೀಡುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಭರವಸೆ ನೀಡಿದ್ದಾರೆ.
ನಗರದ ಹೊರ ವಲಯದ ನಂದಿ ಕೋಲ್ಡ್ ಸ್ಟೋರೇಜ್ ಬಳಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ನೆರೆದಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವುದಾಗಿ ತಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಲಿದ್ದಾರೆ ಎಂದು ಕಾತುರದಿಂದ ನೋಡುತ್ತಿದ್ದರು. ಅಲ್ಲದೇ ವೇದಿಕೆಯ ಮುಂಭಾಗಕ್ಕೆ ಹಲವರು ಬಂದು, ಕುಮಾರಸ್ವಾಮಿಯವರೇ ಇಲ್ಲಿ ಚುನಾವಣೆಗೆ ನಿಂತುಕೊಳ್ಳಬೇಕೆಂದು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಜ್ಯದ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾಗಿದೆ. ಇದಕ್ಕಾಗಿ ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕು. ಆದರೆ, ಈ ಒಂದು ಕ್ಷೇತ್ರವನ್ನು ನೋಡಿಕೊಂಡು ಇಲ್ಲಿ ಪ್ರಚಾರ ಮಾಡಿಕೊಂಡಿದ್ದರೆ ಬೇರೆ ಕಡೆ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡು ದಿನ ಕಾಲಾವಕಾಶ ಕೊಡಿ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರನ್ನು ಒಪ್ಪಿಸುತ್ತೇನೆ. ಅವರು ಸಕಾತ್ಮಾಕವಾಗಿ ಸ್ಪಂದಿಸುವ ಭರವಸೆ ತಮಗಿದೆ. ಆ ನಂತರ ಇಲ್ಲಿನ ಜನರ ಒತ್ತಾಯದಂತೆ ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ನಿಂತುಕೊಳ್ಳುವುದರ ಬಗ್ಗೆ ಘೋಷಣೆ ಮಾಡುತ್ತೇನೆ ಎಂದರು.
ಪ್ರಚಾರ ಆರಂಭಿಸಿ: ಸಮಾವೇಶ ನಡೆದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರಚಾರ ಶುರು ಮಾಡಿ, ಎಚ್.ಡಿ. ಕುಮಾರಸ್ವಾಮಿಯೇ ಇಲ್ಲಿ ಚುನಾವಣೆಗೆ ನಿಲ್ಲಲ್ಲಿದ್ದಾರೆ. ಅವರನ್ನು ಜನರು ಜಾತಿಮತ ಭೇದ ಮರೆತು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಜನರಿಗೆ ತಿಳಿಸಿ ಎಂತಲೂ ಕುಮಾರಸ್ವಾಮಿ ಕರೆ ನೀಡಿದರು.
ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಕುಮಾರಸ್ವಾಮಿಯ ಎರಡು ಕಣ್ಣುಗಳಿದ್ದಂತೆ, ಇಲ್ಲಿನ ಜನರ ಮಾತಿಗೆ ತಲೆ ಬಾಗಿ ನಡೆದುಕೊಳ್ಳುತ್ತೇನೆ. ಇಲ್ಲಿ ಚುನಾವಣೆಗೆ ನಿಲ್ಲುವಂತೆ ಜನರು ತೋರಿಸುತ್ತಿರುವ ಅಭಿಮಾನ ಎಂದೂ ಮರೆಯಲು ಸಾಧ್ಯವಿಲ್ಲ. ಇದಕ್ಕೆ ಜನರಿಗೆ ನಿರಾಸೆ ಮೂಡಿಸಬಾರದೆನ್ನುವುದು ನನ್ನ ಭಾವನೆ, ಈ ಹಿನ್ನೆಲೆಯಲ್ಲಿ ಇಲ್ಲಿ ಸ್ಪರ್ಧೆಗಿಳಿಯಲು ಪಕ್ಷದಿಂದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗುತ್ತೇನೆ. ಈ ವಿಶ್ವಾಸವೂ ನನಗಿದೆ. ಆದರೆ, ಇಲ್ಲಿ ಚುನಾವಣೆಗೆ ನಿಂತುಕೊಂಡರೂ ಒಂದೆರಡು ದಿನ ಪ್ರಚಾರಕ್ಕೆ ಬರಬಹುದೇ ಹೊರತು ಎಲ್ಲಾ ಕಡೆ ಬರಲು ಸಾಧ್ಯವಿಲ್ಲ. ನೀವೇ ನನ್ನನ್ನು ಗೆಲ್ಲಿಸುತ್ತೇವೆ ಎಂಬ ಭರವಸೆ ನೀಡಬೇಕು. ನಂತರ ನಾಮಪತ್ರ ಸಲ್ಲಿಸುವ ದಿನವನ್ನು ನಾವು ನಿಮಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ಇದಕ್ಕೆ ಸ್ಥಳದಲ್ಲಿದ್ದ ಕಾರ್ಯಕರ್ತರು ಸ್ಪಷ್ಟ ಭರವಸೆ ನೀಡಿ ಇಲ್ಲಿಯೇ ಚುನಾವಣೆಗೆ ನಿಲ್ಲುವ ಘೋಷಣೆ ಮಾಡಬೇಕೆಂದು ಕುಮಾರಸ್ವಾಮಿಯವರನ್ನು ಮುತ್ತಿಕೊಂಡರು. ಅದಕ್ಕೂ ಎರಡು ದಿನ ಟೈಮ್ ಕೊಡಿ, ಪಕ್ಷದ ಮುಖಂಡರನ್ನು ಒಪ್ಪಿಸುತ್ತೇನೆ, ನಿಮ್ಮ ಒತ್ತಾಯದಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.