ಗುಣಾತ್ಮಕ ಫಲಿತಾಂಶಕ್ಕೆ ಸಿದ್ಧರಾಗಿ
ಕೋಲಾರ: ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶಕ್ಕೆ ಮಕ್ಕಳನ್ನು ಸಿದ್ಧಗೊಳಿಸುವಂತೆ ಡಿಡಿಪಿಐ ಎಸ್.ವಿ. ಪದ್ಮನಾಭ್ ಶಿಕ್ಷಕರಿಗೆ ಕರೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ತೃತೀಯ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 1,137 ಅಗ್ರಶ್ರೇಣಿ, 4,889 ಪ್ರಥಮ ಶ್ರೇಣಿ ಹಾಗೂ 3,916 ಮಕ್ಕಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಸಲುವಾಗಿ ಹಮ್ಮಿಕೊಂಡಿದ್ದ ಫಲಿತಾಂಶ ವಿಶ್ಲೇಷಣಾ ಸಭೆಯಲ್ಲಿ ಅವರು ಮಾತನಾಡಿ, ಗುಣಾತ್ಮಕ ಫಲಿತಾಂಶಕ್ಕಾಗಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರ ಸಂಖ್ಯೆ ಹೆಚ್ಚಬೇಕು ಮತ್ತು ಶೇ.100 ಸಾಧನೆಯ ಶಾಲೆಗಳ ಸಂಖ್ಯೆ ಈ ಬಾರಿ 100ಕ್ಕೇರಲು ಶಿಕ್ಷಕರು ಶ್ರಮಿಸಬೇಕೆಂದರು.
ತೃತೀಯ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 20,382 ವಿದ್ಯಾರ್ಥಿಗಳು ಕುಳಿತಿದ್ದು, 15,404 ಮಂದಿ ತೇರ್ಗಡೆಯಾಗುವ ಮೂಲಕ ಶೇ.75.58 ಫಲಿತಾಂಶ ಲಭ್ಯವಾಗಿದೆ ಎಂದ ಅವರು, ಇದು ಕಳೆದ 2ನೇ ಪೂರ್ವ ಸಿದ್ಧತಾ ಪರೀಕ್ಷೆ ಫಲಿತಾಂಶಕ್ಕಿಂತ ಶೇ.3ರಷ್ಟು ಪ್ರಗತಿಯಾಗಿದೆ ಎಂದರು.
ಮಾ.27ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವ ಪರಿಸ್ಥಿತಿ ನಿರ್ಮಾಣವಾದರೆ ಅಂತಹ ಕೇಂದ್ರದ ಮುಖ್ಯ ಅಧೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದೇ ರೀತಿ ಏ.19 ರಿಂದ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಮೌಲ್ಯಮಾಪಕರು ಗೈರಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಶಿಕ್ಷಣಾಧಿಕಾರಿ ಕೆ.ಎಂ. ಜಯರಾಮರೆಡ್ಡಿ, ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ರಜೆ ನೀಡಬೇಡಿ, ಅವರ ಸಂಪರ್ಕದಲ್ಲಿರಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಪೂರ್ವಸಿದ್ಧತಾ ಪರೀಕ್ಷೆಗಳು ಸಹಕಾರಿಯಾಗಿವೆ, ಇದರಲ್ಲಿಯೂ ಫಲಿತಾಂಶ ಏರುಮುಖವಾಗಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳು ಧೈರ್ಯದಿಂದ ಬರೆಯಲು ಸಹಕಾರಿಯಾಗಿದೆ ಎಂದರು. ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ತಡೆಯಲು ನಮ್ಮ ಜಿಲ್ಲೆಯ ಜಾಗೃತದಳಗಳ ಜತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಜಾಗೃತದಳ ಬರಲಿದೆ, ವಿನಾಕಾರಣ ಅನುಮಾನಗಳಿಗೆ ಎಡೆ ನೀಡಬೇಡಿ, ಪರೀಕ್ಷಾ ಪಾವಿತ್ರತೆ ಕಾಪಾಡಿ, ಆಯಾ ವಿಷಯ ಶಿಕ್ಷಕರು, ಆಯಾ ದಿನ ಪರೀಕ್ಷಾ ಕೇಂದ್ರದತ್ತ ಸುಳಿಯಬೇಡಿ ಎಂದು ಸಲಹೆ ನೀಡಿದರು.
ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಫಲಿತಾಂಶ ವಿಶ್ಲೇಷಿಸಿದ ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್, ಪ್ರತಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಗಂಡು ಮಕ್ಕಳೇ ಹಿನ್ನಡೆ ಅನುಭವಿಸುತ್ತಿದ್ದು, ಈ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರು ಉಳಿದ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದರು.
ವಿಷಯ ಪರಿವೀಕ್ಷಕ ಸಿ.ಆರ್. ಅಶೋಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಿವೈಪಿಸಿ ಮಾಧವರೆಡ್ಡಿ, ವಿಷಯ ಪರಿವೀಕ್ಷಕ ರಾಜಣ್ಣ, ವೆಂಕಟಸ್ವಾಮಿ, ಬಾಬುಜನಾರ್ಧನನಾಯ್ಡು, ಮಲ್ಲಿಕಾರ್ಜುನಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ. ಜಗದೀಶ್, ಸುಬ್ರಹ್ಮಣ್ಯಂ, ದೇವರಾಜ್, ರಾಘವೇಂದ್ರ, ಕೃಷ್ಣಮೂರ್ತಿ, ಜಯರಾಜ್ ಇದ್ದರು.