ಜೆಡಿಎಸ್ ಅಭ್ಯರ್ಥಿ ವಿರುದ್ಧ ದೂರು
ಕೋಲಾರ: ಕೋಲಾರ ಕ್ಷೇತ್ರದ ನಿಯೋಜಿತ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಮಾಲೇಪಾಡು ಗ್ರಾಮದವರಾಗಿದ್ದು, ಬಿಸಿಎ ವರ್ಗಕ್ಕೆ ಸೇರಿದ ಇವರು ಭೋವಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿರುವುದನ್ನು ಬೆಂಗಳೂರಿನ ಉತ್ತರ ತಾಲೂಕಿನ ತಹಸೀಲ್ದಾರ್ ಅವರು ರದ್ದು ಮಾಡಿದ್ದಾರೆಂದು ಕೋಲಾರ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಡಿ. ಮುನೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು ಸುಳ್ಳು ದಾಖಲೆ ಸೃಷ್ಟಿಸಿ ಭೋವಿ ಜಾತಿ ಪತ್ರ ಪಡೆದಿದ್ದ ಕೇಶವ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅನರ್ಹರಾಗಿರುವುದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಚುನಾವಣಾ ಕಾರ್ಯಭಾರದ ಮೇಲೆ ಇರುವುದರಿಂದ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಕೇಶವರವರು ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನಲ್ಲಿ ಹುಟ್ಟಿ ವ್ಯಾಸಂಗ ಮಾಡಿರುವುದಕ್ಕೆ ಅವರ ಶಾಲಾ ದಾಖಲಾತಿಗಳಲ್ಲಿ ಸ್ಪಷ್ಟವಾಗಿದೆ, 2014ರ ಜ.31ರ ಪ್ರಕಾರ ಇವರು ಮನದಪಲ್ಲಿಯ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಫೋಟೋ ಇದೆ. ಆಂಧ್ರ ಪ್ರದೇಶದಲ್ಲಿ ಪಡೆದಿರುವ ಜಾತಿ ಪ್ರಮಾಣ ಪತ್ರದಲ್ಲಿ ವಡ್ಡ ಎಂಬ ಜಾತಿ ಬಿಸಿಎಗೆ ಒಳಪಟ್ಟಿದೆ ಎಂದು ಅಲ್ಲಿನ ತಹಸೀಲ್ದಾರ್ ಪ್ರಮಾಣ ಪತ್ರ ನೀಡಿದ್ದಾರೆಂದು ವಿವರಿಸಿದರು.
1994ರಲ್ಲಿ ತನ್ನ ಊರು ಕೋಲಾರ ತಾಲೂಕಿನ ನಾಗನಾಯಕನಹಳ್ಳಿ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಪತ್ರಕರ್ತರಿಗೆ ತಾನು ಮಾಲೂರು ತಾಲೂಕಿನವರು ಎಂದು ಹೇಳಿದ್ದಾರೆ. ಇದೇ ಮಾ.6ರಂದು ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್‌ರವರ ಅನುಮೋದನೆ ಇಲ್ಲದೆ ಅಕ್ರಮವಾಗಿ ಡಿಜಿಟಲ್ ಕಂಪ್ಯೂಟರೀಕೃತ ಜಾತಿ ಪತ್ರ ತೆಗೆದುಕೊಂಡ ಹಿನ್ನಲೆಯಲ್ಲಿ ಇವುಗಳನ್ನು ಪರಿಶೀಲಿಸಿ ತನಿಖೆ ಮಾಡಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಆದೇಶದಂತೆ ಅಕ್ರಮವಾಗಿ ತೆಗೆದುಕೊಂಡಿದ್ದ ಜಾತಿ ಪ್ರಮಾಣ ಪತ್ರವನ್ನು ಮಾ.19ರಂದು ರದ್ದುಗೊಳಿಸಿರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಕೇಶವ ಅವರಿಗೆ ಅವಕಾಶ ನೀಡಬಾರದೆಂದು ವಾದಿಸಿದರು.
ಜಿಲ್ಲಾ ಜೆಡಿಎಸ್ ಮುಖಂಡರು ಹಲವರು ಕೇಶವ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಯತ್ನಿಸುತ್ತಿದ್ದಾರೆ. ಕೇಶವ ಜಾತಿ ಪ್ರಮಾಣ ಪತ್ರ ರದ್ದು ಸೇರಿದಂತೆ ಇನ್ನಿತರ ಅಕ್ರಮಗಳ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೇಶವ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದಲ್ಲಿ ಮತದಾರರ ಬಳಿ ಹೋಗಿ ನ್ಯಾಯ ಕೇಳುತ್ತೇವೆಂದು ಡಿ. ಮುನೇಶ್ ತಿಳಿಸಿದರು.
ಕೇಶವ ಸ್ಪರ್ಧೆಗೆ ಯೋಗ್ಯರಲ್ಲದ ಕಾರಣ ಪಕ್ಷದ ವರಿಷ್ಠರು ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು, ಮಾ.26ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇರುವುದರಿಂದ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಜೆಡಿಎಸ್ ಕೋಲಾರ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕೇಶವ ಅವರು ಜೆಡಿಎಸ್ ವರಿಷ್ಠರಿಗೆ ತಪ್ಪು ಮಾಹಿತಿ ನೀಡಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮೂಲ ವಿಷಯಗಳನ್ನು ಮರೆಮಾಚಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಸಂಚು ರೂಪಿಸುತ್ತಿದ್ದಾರೆಂದು ಪ್ರಜಾ ವಿನೋಚನಾ ಚಳುವಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯವರು ಸೂಕ್ತ ದಾಖಲಾತಿಗಳೊಂದಿಗೆ ಹೋರಾಟ ನಡೆಸುತ್ತಿದ್ದಾರಲ್ಲದೆ, ನಾಮಪತ್ರ ಸ್ವೀಕೃತಿ ಮಾಡದಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರ ಬೆಂಬಲವಿರುವುದರಿಂದ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡ ಎನ್. ಅಂಬರೀಶ್, ಚಿಂತಾಮಣಿಯ ವಂಶಿ, ವೆಂಕಟೇಶ್, ಲಕ್ಷ್ಮೀಪತಿ ಇದ್ದರು.