ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್‌ಗೆ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ನೀಡಿ

Mainashree
Updated On : 21 Mar 2014, 12:33 pm

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ದೊರಕಿಸಿಕೊಡುವ ಮೂಲಕ ಕನ್ನಡಿಗರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಸಹಕರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.
ನಗರದ ಹೊರ ವಲಯದ ನಂದಿ ಕೋಲ್ಡ್ ಸ್ಟೋರೇಜ್ ಬಳಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಹುಟ್ಟಿಕೊಂಡಿರುವ ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಜೆಡಿಎಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಿದಾಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರವರು ಮತ್ತೆ ಪ್ರಧಾನಿಯಾಗಬಹುದೆನ್ನುವುದನ್ನು ಪರೋಕ್ಷವಾಗಿ ಹೇಳಿದರು.
ಈಗಾಗಲೇ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚಿನ ಸ್ಥಾನ ಗೆಲ್ಲುತ್ತಿರುವುದರಿಂದ ಆ ರಾಜ್ಯಗಳಿಗೆ ಅನೇಕ ಯೋಜನೆಗಳು ಹೋಗಿ ಅಭಿವೃದ್ಧಿಯನ್ನು ಕಾಣುತ್ತಿವೆ. ಆದರೆ, ನಮ್ಮ ರಾಜ್ಯದ ಅಭಿವೃದ್ಧಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಿರ್ಲಕ್ಷ್ಯದಿಂದ ಸಾಧಿಸಲಾಗುತ್ತಿಲ್ಲ. ಇದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 16 ರಿಂದ 20 ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ದೊರಕಿಸಿಕೊಡಬೇಕು. 1996 ರಲ್ಲಿ ಜೆಡಿಎಸ್ 16 ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ದೇವೇಗೌಡರವರು ಪ್ರಧಾನಿಯಾಗಲು ಸಾಧ್ಯವಾಯಿತು. ಅವರ ಕಾಳಜಿಯಿಂದ ರಾಜ್ಯದ ನೀರಾವರಿ ಯೋಜನೆಗಳಿಗೆ ಒತ್ತು ಸಿಕ್ಕಿತ್ತು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ- ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುತ್ತೇವೆ ಎಂದೇಳಿ ಚುನಾವಣೆಗಾಗಿ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ, ಅದರಿಂದ ಕೇವಲ 9 ಟಿಎಂಸಿ ನೀರು ಸಿಗುತ್ತದೆ. ಇದನ್ನು ಕೇಂದ್ರ ಜಲ ಸಮಿತಿ ತಿಳಿಸಿದೆ. ಆದರೂ ಈ ಭಾಗದ ಜನರನ್ನು ಬಲಿಪಶು ಮಾಡಲು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಡೀಲಿಂಗ್ ನಾವು ಮಾಡಲ್ಲ: ಲೋಕಸಭಾ ಚುನಾವಣೆಗೆ ಪಕ್ಷದ ವತಿಯಿಂದ ಪ್ರಬಲರಲ್ಲದ ಅಭ್ಯರ್ಥಿಗಳನ್ನು ನಿಲ್ಲಿಸಿ ಜೆಡಿಎಸ್ ಡೀಲಿಂಗ್ ಮಾಡಿಕೊಂಡಿದೆ ಎಂಬ ಆರೋಪ ಸುಳ್ಳು, ನಮ್ಮ ಪಕ್ಷ ಯಾವುದೇ ಆಮಿಷಗಳಿಗೂ ರಾಜಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಡೀಲಿಂಗ್ ನಡೆದಿದೆ. 100 ಕೋಟಿ ರು.ಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೊಯ್ಲಿ ಮತ್ತು ಕೆ.ಎಚ್. ಮುನಿಯಪ್ಪ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ ಎಂದು ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಂದ ಕುಮಾರಸ್ವಾಮಿಯನ್ನು ಓಡಿಸುತ್ತೇವೆ ಎಂದು ಡಿ.ಕೆ. ಬ್ರದರ್ಸ್ ಶಪಥ ಮಾಡುತ್ತಿದ್ದಾರೆ. ಆದರೆ, ಜನರ ಆಶೀರ್ವಾದವಿರುವವರೆಗೂ ಇದು ಸಾಧ್ಯವಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಮಧು ಬಂಗಾರಪ್ಪ, ಮಾಜಿ ಸಚಿವ ಜಮೀರ್ ಅಹಮದ್ ಮಾತನಾಡಿದರು. ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಕೆ.ಎಂ. ಮುನಿಯಪ್ಪ, ಶಾಸಕರಾದ ಶ್ರೀನಿವಾಸಮೂರ್ತಿ, ಪಿಳ್ಳಮುನಿಶಾಮಪ್ಪ, ಜೆ.ಕೆ. ಕೃಷ್ಣಾರೆಡ್ಡಿ, ಎಂ. ರಾಜಣ್ಣ, ವಿಧಾನಪರಿಷತ್ ಸದಸ್ಯ ಈ. ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್, ಕೆ.ಪಿ. ಬಚ್ಚೇಗೌಡ,  ಎನ್. ಜ್ಯೋತಿರೆಡ್ಡಿ, ಮಧುಸೀತಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement