ರು. 1.35 ಲಕ್ಷ ಮೌಲ್ಯದ ಟಿ-ಷರ್ಟ್ ವಶ
ಕೋಲಾರ: ಪರವಾನಗಿ ಇಲ್ಲದೆ ಜೆಡಿಎಸ್ ಚುನಾವಣಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಬೊಲೆರೋ ವಾಹನ ಸೇರಿದಂತೆ 1.35 ಲಕ್ಷ ರು. ಮೌಲ್ಯದ ಟಿ-ಷರ್ಟ್‌ಗಳನ್ನು, ನಗರಠಾಣೆ ಪೊಲೀಸರು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಂಡು ಈ ಸಂಬಂಧ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೇಶವ ಅವರಿಗೆ ಸೇರಿದ, ಅವರ ಭಾವಚಿತ್ರಗಳನ್ನು ಅಂಟಿಸಿದ ಮತ್ತು ಪ್ಲಕ್ಸ್‌ಗಳನ್ನು ಅಳವಡಿಸಿದ್ದ, ಬೊಲೇರೋ ವಾಹನ ಬೆಂಗಳೂರಿನಿಂದ ಆಗಮಿಸಿ ನಗರದ ಮೆಕ್ಕೆ ವೃತ್ತದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅಡ್ಡಗಟ್ಟಿ ಪರಿಶೀಲಿಸಿದಾಗ ಮತದಾರರಿಗೆ ಹಂಚಿಕೆ ಮಾಡಲು ಸಾಗಾಣೆ ಮಾಡುತ್ತಿದ್ದ ಮಾಲು ಪತ್ತೆಯಾಗಿದೆ.
ಇದರಲ್ಲಿ 16 ಬಂಡಲ್‌ಗಳು ಸಿಕ್ಕಿದ್ದು ಇದರಲ್ಲಿ ತಲಾ 120 ಜೆಡಿಎಸ್ ಅಭ್ಯರ್ಥಿಯ ಭಾವಚಿತ್ರ ಹಾಗೂ ಚಿಹ್ನೆಯುಳ್ಳ ಟಿ-ಷರ್ಟ್‌ಗಳು ಪತ್ತೆಯಾಗಿವೆ, ವಾಹನದ ಚಾಲಕ ದೇವನಹಳ್ಳಿ ತಾಲೂಕಿನ ಬೊಮ್ಮವಾರ ಹಳ್ಳಿಯ ಮುನಿಕೃಷ್ಣ ಎಂಬುವನಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಚುನಾವಣಾ ನೀತಿಸಂಹಿತೆ ನಡುವೆಯೂ ಸದರಿ ವಾಹನಕ್ಕೆ ಚುನಾವಣಾ ಪ್ರಚಾರ ಮಾಡಲು ಚುನಾವಣಾ ಆಯೋಗದಿಂದ ಯಾವುದೇ ರೀತಿಯ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.