ರೇಷ್ಮೆ ಮಾರುಕಟ್ಟೆ ಸಿಬ್ಬಂದಿ ಚುನಾವಣೆ ಕೆಲಸಕ್ಕೆ ಬೇಡ
ಶಿಡ್ಲಘಟ್ಟ: ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ನೇಮಕ ಮಾಡಿದ್ದು, ಸಿಬ್ಬಂದಿಯನ್ನು ಚುನಾವಣಾ ಕಾರ್ಯದಿಂದ ಕೈಬಿಡಬೇಕೆಂದು ಕೋರಿ ರೈತ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು, ಮಾರುಕಟ್ಟೆಯಿಂದ ಒಂದು ದಿನಕ್ಕೆ 45ರಿಂದ 50 ಟನ್ ಗೂಡು ಆಗುತ್ತಿದೆ. ರೈತರಿಗೆ ಸುಮಾರು 1.75 ಕೋಟಿ ರು., ಸರ್ಕಾರಕ್ಕೆ ದಿನಕ್ಕೆ ಸುಮಾರು 3 ಲಕ್ಷ ರು. ತೆರಿಗೆ ರೊಪದಲ್ಲಿ ಸಂದಾಯವಾಗುತ್ತಿದ್ದು, ರೇಷ್ಮೆ ಗೂಡು ಮಾರುಕಟ್ಟೆಯ ಸಿಬ್ಬಂದಿಯಲ್ಲಿ ಚುನಾವಣೆಗೆ 25 ಮಂದಿ ನಿಯೋಜನೆ ಮಾಡಲಾಗಿದೆ. ಉಳಿದ 14 ಜನರಲ್ಲಿ 10 ಡಿ. ಗ್ರೂಪ್ ನೌಕರರು, 4 ಅಧಿಕಾರಿಗಳು ಇದ್ದು ಮಾರುಕಟ್ಟೆ ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದ ಮಾರುಕಟ್ಟೆ ಯತಾಸ್ಥಿತಿಯಲ್ಲಿ ನಡೆದುಕೊಂಡು ಹೋಗಲು ಅಧಿಕಾರಿಗಳನ್ನು ವಾಪಸ್ಸು ಪಡೆಯಬೇಕೆಂದು ಕೋರಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ರೇಷ್ಮೆ ಗೂಡಿನ ಮಾರುಕಟ್ಟೆ ಅಧಿಕಾರಿಗಳನ್ನು ವಾಪಸ್ಸು ಪಡೆಯಬೇಕೆಂದು ಕೋರಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಭಕ್ತರ ಹಳ್ಳಿ ಭೈರೆಗೌಡ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಮುನಿನಂಜಪ್ಪ, ಟಿ. ಕೃಷ್ಣಪ್ಪ, ದೇವರಾಜ್ ಇದ್ದರು.