ಸುದ್ದಿ ಸಂಕ್ಷೇಪ
ಆದಿಮದಲ್ಲಿ ರೈತರ ಅಧ್ಯಯನ ಶಿಬಿರ
ಕೋಲಾರ: ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ರೈತ ಸಂಘದ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಮಾ.21ಹಾಗೂ 22 ರಂದು ಎರಡು ದಿನಗಳ ಕಾಲ ಕೋಲಾರದ ತೇರಹಳ್ಳಿಯ ಅದಿಮ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಅಧ್ಯಯನ ಶಿಬಿರದಲ್ಲಿ ಮಾ.21 ರಂದು ರೈತ ಸಂಘದ ಚರಿತ್ರೆ ಕುರಿತು ಕಾರ್ಮಿಕ ಮುಖಂಡ ಕೆ. ಪ್ರಕಾಶ್, ಜಾತಿವಾದ, ಕೋಮುವಾದ ಮತ್ತು ರೈತ ಕೂಲಿಕಾರರ ಐಕ್ಯತೆ ಕುರಿತು ಪತ್ರಕರ್ತರಾದ ಎಸ್.ವೈ. ಗುರುಶಾಂತ್, ಕೆಪಿಆರ್‌ಎಸ್ ಮತ್ತು ಇತರೇ ರೈತ ಸಂಘಗಳ ಸ್ವರೂಪ ಮತ್ತು ವ್ಯತ್ಯಾಸಗಳ ಕುರಿತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಸಿ. ಬಯ್ಯಾರೆಡ್ಡಿ, ಕೋಲಾರ ಜಿಲ್ಲಾ ರೈತ ಸಂಘದ ಚರಿತ್ರೆ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಉಪನ್ಯಾಸ ನೀಡಲಿದ್ದಾರೆ.
4ನೇ ಘಟಿಕೋತ್ಸವ
ಕೋಲಾರ: ದೇವರಾಜ್ ಅರಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನ ಸಂಸ್ಥೆಯ ನಾಲ್ಕನೇಯ ವಾರ್ಷಿಕ ಘಟಿಕೋತ್ಸವವನ್ನು ಮಾ.22 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಬಯಲು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಮುಖ್ಯ ಅತಿಥಿಗಳು ಹಾಗೂ ಘಟಿಕೋತ್ಸವದ ಭಾಷಣಕಾರರಾಗಿ ಭಾರತರತ್ನ ಡಾ. ಸಿ.ಎನ್.ಆರ್. ರಾವ್ ಭಾಗವಹಿಸುವರು. ಪದ್ಮಭೂಷಣ ಡಾ. ಪಿ.ಬಲರಾಮ, ನಿರ್ದೇಶಕರು ಭಾರತ ವೈಜ್ಞಾನಿಕ ಸಂಸ್ಥೆ, ಬೆಂಗಳೂರು ಪದವಿ ಸಮರ್ಪಣೆ ಮಾಡಲಿದ್ದಾರೆ.ಕುಲಪತಿಗಳಾದ ಡಾ. ಪ್ರೇಮನಾಥ್ ಎಫ್ ಕೊಟ್ಟೂರ್ ವರದಿ ವಾಚನ ಮಾಡಲಿದ್ದಾರೆ.
ನಿಧನಕ್ಕೆ ಸಂತಾಪ
ಮಾಲೂರು: ಹಿರಿಯ ಪತ್ರಕರ್ತ ಖುಷ್ವಂತ್ ಸಿಂಗ್ ಹಾಗೂ ಪತ್ರಕರ್ತ ಬಿ. ಸನತ್ ಕುಮಾರ್ ಅವರ ನಿಧನಕ್ಕೆ ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘ ಕಂಬಿನಿ ಮಿಡಿದಿದೆ.
ಸಂಘದ ಅಧ್ಯಕ್ಷ ರವೀಂದ್ರ ಮಾತನಾಡಿ, ಹಿರಿಯ ಪತ್ರಕರ್ತ ಬಿ.ವಿ. ವೈಕುಂಠ ರಾಜು ಅವರ ಪುತ್ರನಾಗಿದ್ದ ಬಿ. ಸನತ್ ಕುಮಾರ್ ಅಕಾಲಿಕ ಮರಣದಿಂದ ರಾಜ್ಯ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ ಎಂದರು. ತಮ್ಮ ಹಾಸ್ಯ ಶೈಲಿಯ ಸಾಹಿತ್ಯದಿಂದ ಸಮಾಜದ ಅಂಕುಡೊಂಕುಗಳನ್ನು ತೋರಿಸುತ್ತಿದ್ದ ಖುಷ್ವಂತ್‌ಸಿಂಗ್ ಅವರು ಮಾಧ್ಯಮ ಲೋಕದ ಬೀಷ್ಮರಾಗಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.
ಬಿಜೆಪಿಗೆ ನೇಮಕ
ಮುಳಬಾಗಲು: ತಾಲೂಕಿನ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಪಟ್ಟಣದ ಮುತ್ಯಾಲಪೇಟೆ ನಿವಾಸಿ ವಿ. ಗೋಪಾಲಕೃಷ್ಣಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅತ್ತಿಹಳ್ಳಿ ವೆಂಕಟರವಣಪ್ಪ ತಿಳಿಸಿದ್ದಾರೆ.