ಜಮೀನು ವಿವಾದ ಕೊಲೆಯಲ್ಲಿ ಅಂತ್ಯ
ಚಿಂತಾಮಣಿ: ದೊಡ್ಡಗಂಜೂರು ಸರ್ಕಾರಿ ಜಮೀನಿನಲ್ಲಿ ತಿಪ್ಪೆಗುಂಡಿ ವಿಷಯವಾಗಿ ಶಾಸಕ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಮಾರಾಮಾರಿ ನಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ದೊಡ್ಡಗಂಜೂರಲ್ಲಿ ನಡೆದಿದೆ.
ಗ್ರಾಮದ ನಂಜರೆಡ್ಡಿ(60) ಮೃತಪಟ್ಟವನು. ಇವರ ಮಗ ನಾರಾಯಣರೆಡ್ಡಿ, ಸೊಸೆ ವಿಜಯಮ್ಮ ಅವರಿಗೆ ತೀವ್ರ ಗಾಯಗಳಾಗಿ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಪಂ ಸದಸ್ಯ ಜಯರಾಮರೆಡ್ಡಿ, ಈರಪ್ಪರೆಡ್ಡಿ, ಆನಂದರೆಡ್ಡಿ, ಮಂಜುನಾಥರೆಡ್ಡಿ, ವೀರಭದ್ರಪ್ಪ, ನವೀನ್ಕುಮಾರ್, ಅಂಬರೀಷ್, ಕೆ.ಆರ್.ನಾರಾಯಣಸ್ವಾಮಿ, ಕೋದಂಡರಾಮರೆಡ್ಡಿ, ಗಂಗಾಧರ, ಮಂಜುನಾಥ್, ವೆಂಕಟರೆಡ್ಡಿ, ಕರಗ ಶ್ರೀರಾಮರೆಡ್ಡಿ, ಪ್ರಕಾಶ್ ಸೇರಿದಂತೆ ಹಲವರು ಗ್ರಾಮ ಬಿಟ್ಟು ಪರಾರಿಯಾಗಿದ್ದಾರೆ. ಈ ಪೈಕಿ ಆರೋಪಿ ಶಿವಾನಂದ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಘಟನೆ ವಿವರ: ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿ ಸರ್ಕಾರಿ ಜಮೀನು ಸರ್ವೆ ನಂ.188ರಲ್ಲಿನ ತಿಪ್ಪೆ ಗುಂಡಿ ವಿಷಯವಾಗಿ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಗ್ರಾಪಂ ಸದಸ್ಯ ಜಯರಾಮರೆಡ್ಡಿ ಬೆಂಬಲಿಗರಿಗೂ ಹಾಗೂ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತ ಮುಖಂಡ ನಂಜರೆಡ್ಡಿ ಬೆಂಬಲಿಗರಿಗೂ ಕಳೆದ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆದಿತ್ತು.
ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ದೊಡ್ಡಗಂಜೂರು ಗ್ರಾಮದ ಭಾನುಪ್ರಕಾಶ್ ಎಂಬಾತ ತಿಪ್ಪೆಗುಂಡಿಯಲ್ಲಿ ಮಣ್ಣು ಹೊಡೆಸಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಮುಂದಾದಾಗ ನಂಜರೆಡ್ಡಿ ಇದನ್ನು ತಡೆಯಲು ಹೋಗಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಜಯರಾಮರೆಡ್ಡಿ ಹಾಗೂ ಹಿಂಬಾಲಕರು ಮಚ್ಚು, ದೊಣ್ಣೆ, ಕಲ್ಲು ಹಿಡಿದು ನಂಜರೆಡ್ಡಿ ತಲೆಗೆ ಏಕಾಏಕಿ ಹಲ್ಲೆ ಮಾಡಿದ ಪರಿಣಾಮ ನಂಜರೆಡ್ಡಿ(60) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಧ್ಯೆ ಬಂದ ಮಗ ನಾರಾಯಣರೆಡ್ಡಿ, ಸೊಸೆ ವಿಜಯಮ್ಮ ಅವರಿಗೂ ತೀವ್ರ ಗಾಯಗಳಾಗಿವೆ.
ಸದ್ಯ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸ್ಥಳದಲ್ಲಿ ಜಿಲ್ಲಾ ಶಸ್ತ್ರಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ಬೂದಿ ಮುಚ್ಚಿದ ಕೆಂಡ: ದೊಡ್ಡಗಂಜೂರು ಗ್ರಾಮವು ದಶಕಗಳಿಂದ ಸೂಕ್ಷ್ಮ ಗ್ರಾಮವಾಗಿದ್ದು, ರಾಜಕೀಯ ಪಕ್ಷಕ್ಕಿಂತ ಸ್ವಾಮಿ ನಿಷ್ಠೆ ತೋರಿಸುವ ಇಲ್ಲಿನ ಜನ ಆಂಧ್ರಪ್ರದೇಶದ ರಾಯಲಸೀಮ ಶೈಲಿಯಲ್ಲಿ ರಾಜಕೀಯ ಪ್ರತಿಷ್ಟೆಗಾಗಿ ಸಣ್ಣ ಪುಟ್ಟ ವಿಷಯಗಳಲ್ಲಿಯೂ ರಾಜಕೀಯ ಬೆರೆಸಿ ಮಾತನಾಡುತ್ತಾರೆ. ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಉದ್ಭವಗೊಂಡಿದೆ.