ದೊಡ್ಡಗಂಜೂರಲ್ಲಿ ಪೊಲೀಸರ ಗಸ್ತು
ಚಿಂತಾಮಣಿ: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ನಂಜರೆಡ್ಡಿ ಕೊಲೆ ಹಿನ್ನೆಲೆಯಲ್ಲಿ ಪೊಲೀಸರು ದೊಡ್ಡಗಂಜೂರು ಗ್ರಾಮದಲ್ಲಿ ಗಸ್ತು ತಿರುಗಿ ಗ್ರಾಮಸ್ಥರಲ್ಲಿ ಧೈರ್ಯ ತುಂಬಲು ಮುಂದಾದರು.
ಗ್ರಾಮದಲ್ಲಿ ಶುಕ್ರವಾರ ನಡೆದ ಘಟನೆಯಿಂದ ಜನರು ಭಯಗೊಂಡಿದ್ದು, ಬಾಗಿಲು ಹಾಕಿಕೊಂಡು ಮನೆಯೊಳಗೇ ಕೂತಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಆಗಿರುವುದರಿಂದ ಅನೇಕ ವಿದ್ಯಾರ್ಥಿಗಳು ಮನೆ ಬಿಟ್ಟು ಹೊರ ಹೋಗಲು ಹೆದರುತ್ತಿದ್ದು, ಪೊಲೀಸರು ಗ್ರಾಮಸ್ಥರಲ್ಲಿ ಧೈರ್ಯ ತುಂಬಲು ಗ್ರಾಮದ ಬೀದಿಗಳಲ್ಲಿ ಗಸ್ತು ತಿರುಗಿದರು.
ಸುದ್ದಿ ತಿಳಿದ ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್ ದೊಡ್ಡಗಂಜೂರು ಗ್ರಾಮಕ್ಕೆ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಗೆ ಸಂಬಂಧಿಸಿದವರು ಯಾರೇ ಆಗಿರಲಿ, ಕಾನೂನು ಬದ್ಧ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.