ನೀತಿ ಸಂಹಿತೆ ಉಲ್ಲಂಘನೆ; ಪ್ರಕರಣ ದಾಖಲು
ಬಂಗಾರಪೇಟೆ: ಅನುಮತಿ ಪಡೆಯದೆ ಮೋದಿರವರ ಚಾಯ್ ಪೇ ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದ ಕಾರಣ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ವಿರುದ್ಧ ಚುನಾವಣಾಧಿಕಾರಿ ತಹಸೀಲ್ದಾರ್ ಉಷಾ ಅವರು ಪ್ರಕರಣ ದಾಖಲಿಸಿ ಕಾರ್ಯಕ್ರಮ ರದ್ದು ಪಡಿಸಿದ ಘಟನೆ ನಡೆಯಿತು.
ಪಟ್ಟಣದ ಶ್ರೀ ಕೋದಂಡರಾಮ ದೇವಾಲಯದ ಮುಂಭಾಗದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ನರೇಂದ್ರ ಮೋದಿಯವರ ಚಾಯ್ ಪೇ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಅನುಮತಿ ಪಡೆಯದ ಕಾರಣ ನೀತಿ ಸಂಹಿತೆ ಪ್ಲೇಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.
ಮಹಾರಷ್ಟ್ರದಲ್ಲಿ ಹಮ್ಮಿಕೊಂಡಿದ್ದ ಮೋದಿಯವರ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ನೇರ ಪ್ರಸಾರ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮಧ್ಯೆ ತಹಸೀಲ್ದಾರ್ ಕಚೇರಿಗೆ ಬಂದ ದೂರವಾಣಿ ಕರೆ ಮೇರೆಗೆ ಅಧಿಕಾರಿ ಸತೀಶ್ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಅನುಮತಿ ಬಗ್ಗೆ ವಿಚಾರಿಸಿದಾಗ ಅಧಿಕೃತ ಅನುಮತಿ ಇಲ್ಲದಿರುವುದು ಬೆಳಕಿಗೆ ಬಂದಿತು. ಅನುಮತಿ ಇಲ್ಲದ ಕಾರ್ಯಕ್ರಮ ರದ್ದು ಪಡಿಸಬೇಕೆಂದು ತಹಸೀಲ್ದಾರ್ ಹಾಗೂ ತಾಲೂಕು ಸಹಾಯಕ ಚುನಾವಣಾಧಿಕಾರಿ ಉಷಾ ಆದೇಶಿಸಿದರು. ಸ್ಥಳದಲ್ಲೇ ಇದ್ದ ಪ್ರೊಜೆಕ್ಟರ್, ಸ್ಕ್ರೀನ್, ಸೌಂಡ್ ಬಾಕ್ಸ್ ಮತ್ತಿತ್ತರೆ ವಸ್ತುಗಳನ್ನು ವಶಕ್ಕೆ ಪಡೆದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.