ಪೊಲೀಸರ ಮೇಲೆ ಹಲ್ಲೆ: ವಿವಾದಿತ ಜಾಗದಲ್ಲೇ ಅಂತ್ಯ ಸಂಸ್ಕಾರ
ಚಿಂತಾಮಣಿ: ಕೊಲೆಯಾದ ಜೆಡಿಎಸ್ ಮುಖಂಡನ ಶವವನ್ನು ವಿವಾದಿತ ಸರ್ಕಾರಿ ಜಮೀನಿನಲ್ಲಿ ಶವಸಂಸ್ಕಾರ ಮಾಡಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದ ಕಾರಣ ರೊಚ್ಚಿಗೆದ್ದ ಜನರು ಪೊಲೀಸರ ಮೇಲೆ ಹಲ್ಲೆ ಮಾಡಿ ಸರ್ಕಾರಿ ಜಮೀನಿನಲ್ಲೇ ಮಣ್ಣು ಮಾಡಿದರು.
ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿ ಜೆಡಿಎಸ್ ಮುಖಂಡ ನಂಜರೆಡ್ಡಿ ಕೊಲೆಯಾದ ಘಟನೆಗೆ ಸಂಬಂಧಿಸಿ ಶವವನ್ನು ಶುಕ್ರವಾರ ರಾತ್ರಿ ಸರ್ಕಾರಿ ಜಮೀನು ಸರ್ವೇ ನಂ 188 ರಲ್ಲಿ ಮಣ್ಣು ಮಾಡಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಮುಂದಾದಾಗ ತಾಲೂಕು ದಂಡಾಧಿಕಾರಿ ಜಿ.ವಿ. ಹನುಮಂತರೆಡ್ಡಿ ತಕ್ಷಣ ಇಲ್ಲಿನ ವಿದ್ಯಾಮಾನಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ವಿಶಾಲ್ ಅವರ ಗಮನಕ್ಕೆ ತಂದರು. ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನಲ್ಲಿ ಶವ ಸಂಸ್ಕಾರ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪೊಲೀಸರ ಮೇಲೆ ತಿರುಗಿ ಬಿದ್ದ ಜನ: ನಂಜರೆಡ್ಡಿ ಶವ ಸಂಸ್ಕಾರ ಸರ್ಕಾರಿ ಭೂಮಿಯಲ್ಲಿ ಮಾಡದಂತೆ ತಾಲೂಕು ದಂಡಾಧಿಕಾರಿ ಪೊಲೀಸರಿಗೆ ಆದೇಶಿಸಿದಾಗ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಶತಾಯ ಗತಾಯ ಸರ್ಕಾರಿ ಜಮೀನಿನಲ್ಲೇ ಮಣ್ಣು ಮಾಡಬೇಕೆಂದು ಪಟ್ಟು ಹಿಡಿದರು. ಡಿವೈಎಸ್ಪಿ ಸಣ್ಣತಿಮ್ಮಪ್ಪ ಮೃತನ ಸಂಬಂಧಿಕರಿಗೆ ಹಾಗೂ ಗ್ರಾಮಸ್ಥರಿಗೆ ಕಾನೂನು ಉಲ್ಲಂಘಿಸಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಇದರಿಂದ ನೂರಾರು ಸಂಖ್ಯೆಯಲ್ಲಿದ್ದ ಗ್ರಾಮಸ್ಥರು ರೊಚ್ಚಿಗೆದ್ದು ಪೊಲೀಸರ ಮೇಲೆ ತಿರುಗಿ ಬಿದ್ದು ಹಲ್ಲೆ ನಡೆಸಿದರು.
ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ತಾಲೂಕು ದಂಡಾಧಿಕಾರಿ ಹಾಗೂ ಪೊಲೀಸರ ಮೇಲೆ ತಿರುಗಿಬಿದ್ದ ಜನರು ಹಲ್ಲೆ ನಡೆಸಿದರು. ರಾತ್ರಿ ಬೀದಿ ದೀಪಗಳಿಲ್ಲದ ಕಾರಣ ಜನರನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ ಮತ್ತು ವಿವಾದಿತ ಸರ್ಕಾರಿ ಜಮೀನಿನಲ್ಲೇ ಶವ ಸಂಸ್ಕಾರ ಮಾಡಿ ಪೊಲೀಸರಿಗೆ ಸೆಡ್ಡು ಹೊಡೆದರು.