ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕೋಲಾರ: ಬಿಜೆಪಿ ಹುರಿಯಾಳು ಎಂ. ನಾರಾಯಣಸ್ವಾಮಿ ಶುಕ್ರವಾರ ಮತ್ತೊಂದು ನಾಮಪತ್ರ ಸಲ್ಲಿಸಿದರು.
ತಮ್ಮ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಶ್ರೀ ಕೋಲಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದು ಮಧ್ಯಾಹ್ನ 1.45ಕ್ಕೆ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿಯವರಿಗೆ ಉಮೇದುವಾರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ನಿ ಸರಸ್ವತಮ್ಮ, ಕೆಜಿಎಫ್ ಶಾಸಕಿ ರಾಮಕ್ಕ, ಮಾಜಿ ಶಾಸಕ ವೈ. ಸಂಪಂಗಿ, ವಿಧಾನ ಪರಿಷತ್ ಸದಸ್ಯ ವೈ. ನಾರಾಯಣಸ್ವಾಮಿ, ಮಾಜಿ ಶಾಸಕ ನಂದೀಶ್ ರೆಡ್ಡಿ ಇದ್ದರು.
ಕೇಶವಗೆ ಎಚ್ಡಿಕೆ ಸಾಥ್: ಜೆಡಿಎಸ್ ಅಧಿಕೃತ ಅಭ್ಯರ್ಥಿ ಕೆ. ಕೇಶವ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಶಾಸಕ ಜಿ.ಕೆ. ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಭಕ್ತವತ್ಸಲಂ ಅವರೊಟ್ಟಿಗೆ ಬಂದು ಐದು ಸೆಟ್ ನಾಮಪತ್ರ ಸಲ್ಲಿಸಿದರು. ಕೇಶವ ಅವರು ತಮ್ಮ ಉಮೇದುವಾರಿಕೆಯನ್ನು ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಅವರಿಗೆ ಮಧ್ಯಾಹ್ನ 3ಗಂಟೆಗೆ ಸಲ್ಲಿಸಿದರು. ಕೇಶವ ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ಗೊಂದಲಗಳು ಇರುವುದರಿಂದ ಅಭ್ಯರ್ಥಿ ಕೇಶವ ಪರವಾಗಿ ಬಂದಿದ್ದ ಹೈಕೋರ್ಟ್ ವಕೀಲ ಶಂಕರಪ್ಪನವರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ನಿಯಮವೇನಿಲ್ಲ. ಆದರೂ ಜಾತಿ ದೃಢೀಕರಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗೆ ಸ್ಪಷ್ಟಪಡಿಸಿದರು. ನಾಮಪತ್ರ ಸಲ್ಲಿಕೆಯ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕರ್ತರಿಗೆ ಟಾಟಾ ಹೇಳಿ ನಿರ್ಗಮಿಸಿದರು. ವೆಂಕಟಶಿವಾರೆಡ್ಡಿ, ಶಾಸಕ ಮಂಜುನಾಥಗೌಡ ಇದ್ದರು.