ಬೀದಿ ನಾಟಕದ ಮೂಲಕ ಮತಜಾಗೃತಿ: ವಿನೋತ್
ಕೋಲಾರ: ಜನತೆಯಲ್ಲಿ ಮತದಾನದ ಮಹತ್ವವನ್ನು ತಿಳಿಸಿ ಶೇ.100ರಷ್ಟು ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಕಮಿಟಿ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಪ್ರಚಾರ ಕಾರ್ಯಕ್ಕೆ ಜಿಪಂ ಕಾರ್ಯನಿರ್ವಹಣಾಧಿಕಾರಿ ವಿನೋತ್ ಪ್ರಿಯಾ ಚಾಲನೆ ನೀಡಿದರು.
ನಗರದ ತಾಪಂ ಕಚೇರಿ ಆವರಣದಲ್ಲಿ ಈ ಜಾಗೃತಿ ಜಾಥಾಗೆ ಚಾಲನೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಶೇ.60ಕ್ಕಿಂತ ಮತದಾನ ನಡೆದಿರುವ ನೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಗ್ರಾಮಗಳಿಗೆ ತೆರಳಿ ಮತದಾನ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ.
ಬೀದಿ ನಾಟಕ, ಭಿತ್ತಪತ್ರಗಳ ಪ್ರದರ್ಶನ, ಚಲನಚಿತ್ರ ಪ್ರದರ್ಶನದ ಮೂಲಕ ಈ ಗ್ರಾಮಗಳಲ್ಲಿ ಮತದಾನದ ಮಹತ್ವ ತಿಳಿಸಿಕೊಡಲು ನಿರ್ಧರಿಸಲಾಗಿದೆ. ಎರಡು ತಂಡಗಳಲ್ಲಿ ತಲಾ 10 ಮಂದಿ ಕಲಾವಿದರು ಗ್ರಾಮಗಳಿಗೆ ತೆರಳಿ ಬೀದಿ ನಾಟಕದ ಮೂಲಕ ಅರಿವು ಮೂಡಿಸಲು ಹೊರಟಿದ್ದಾರೆ.
ಈ ಜಾಗೃತಿ ಜಾಥಾದ ನೇತೃತ್ವವನ್ನು ಜಿಲ್ಲಾ ವಾರ್ತಾಧಿಕಾರಿ ಸಿ.ಎಂ. ರಂಗಾರೆಡ್ಡಿ ವಹಿಸಿದ್ದು, ಕಲಾವಿದರಾದ ವೆಂಕಟಾಚಲಪತಿ, ಮುನಿಸ್ವಾಮಿ, ರೆಡ್ಡಪ್ಪ, ಚಲಪತಿ ಮತ್ತಿತರರು ಕಾರ್ಯ ನಿರ್ವಹಿಸುತ್ತಿದ್ದಾರೆ.