ಮನಸೂರೆಗೊಂಡ 79ನೇ ವರ್ಷದ ಪುಷ್ಪಪಲ್ಲಕ್ಕಿ ಉತ್ಸವ
ಕೆಜಿಎಫ್: ಕೋಲಾರ ಚಿನ್ನದ ಗಣಿ ಪ್ರದೇಶದ ಸುಪ್ರಸಿದ್ಧ ಮುಜರಾಯಿ ಇಲಾಖೆಯಡಿಯಲ್ಲಿನ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ 79ನೇ ವರ್ಷದ ಪುಷ್ಪಪಲ್ಲಕ್ಕಿ ಉತ್ಸವವು ಗುರುವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ರಾತ್ರಿ 12-30ಕ್ಕೆ ಮೊದಲಿಯಾರ್ ಸಂಘದ ವತಿಯಿಂದ ದೇವಾಲಯದಿಂದ ಹೊರಟ ಪುಷ್ಪಪಲ್ಲಕ್ಕಿಯನ್ನು ಸುಮಾರು 15 ಸಾವಿರ ಕೆಜಿ ತೂಕದ ವಿವಿಧ ಹೂಗಳಿಂದ ಅಲಂಕರಿಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ 300 ಮಂದಿ ಭಕ್ತಾಧಿಗಳು ಹೆಗಲ ಮೇಲೆ ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಭಕ್ತಾಧಿಗಳು ಭಕ್ತಿಯಿಂದ ಗೋವಿಂದ, ಗೋವಿಂದ ಎಂಬ ನಾಮಾವಳಿಯನ್ನು ಜಪಿಸುತ್ತಾ ಸಾಗುತ್ತಿದ್ದ ದೃಶ್ಯವು ಜನ ಮನಸೂರೆಗೊಂಡಿತು.
ಪುಷ್ಪಪಲ್ಲಕ್ಕಿ ಪ್ರಯುಕ್ತ ದಾರಿಯುದ್ದಕ್ಕೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪುಷ್ಪಪಲ್ಲಕ್ಕಿ ಉತ್ಸವದ ಸಲುವಾಗಿ ಹಲವು ಬಗೆಯ ಭಕ್ತರಂಜನಾ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಏರ್ಪಡಿಸಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಪುಷ್ಪಪಲ್ಲಕ್ಕಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಜರಾಯಿ ಇಲಾಖೆ, ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿಯವರು ಸಕಲ ಸಿದ್ಧತೆಗಳನ್ನು ಮಾಡಿದ್ದರು.
ಪುಷ್ಪಪಲ್ಲಕ್ಕಿ ಉತ್ಸವದೊಂದಿಗೆ ಪೆದ್ದಪಲ್ಲಿ ಶ್ರೀ ಆದಿಶಕ್ತಿ ಗಂಗಮ್ಮ, ರಾಮಲಿಂಗೇಶ್ವರಸ್ವಾಮಿ, ವೀರಾಂಜನೇಯಸ್ವಾಮಿ, ಸುಬ್ರಮಣಿಸ್ವಾಮಿ, ವರಸಿದ್ದಿವಿನಾಯಕ, ಮೇಲ್‌ಮರವತ್ತೂರ್ ಆದಿಪರಾಶಕ್ತಿ, ಪಚ್ಚೈ ಗಂಗಮ್ಮ, ಪಾರಂಡಹಳ್ಳಿ ಶನೈಶ್ಚರಸ್ವಾಮಿ, ಮತ್ತು ಜೇಷ್ಠಾದೇವಿಯ, ಮುತ್ತುಮಾರಿಯಮ್ಮನ ಉತ್ಸವಗಳು ಸಾಗಿ ಬಂದವು.
ದೇವಾಲಯದ ಆವರಣದಲ್ಲಿ ಮೊದಲಿಯಾರ್ ಸಂಘದ ವತಿಯಿಂದ ಎಂಟು ಅಡಿಗಳ ಅಗರಬತ್ತಿಯನ್ನು 48 ಗಂಟೆಗಳ ಕಾಲ ಉರಿಯಲು ಇಡಲಾಗಿತ್ತು. ಸುಗಂಧ ಸುವಾಸನೆಯ ಅಗರಬತ್ತಿಯನ್ನು ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಸುಬ್ರಮಣ್ಯ, ಕೃಷ್ಣ ಹಾಗೂ ನಂದೀಶ್ ಹೊತ್ತಿಸಿದರು. ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ, ಮೊದಲಿಯಾರ್ ಸಂಘದ ಅಧ್ಯಕ್ಷ ಉಮಾಕಾಂತ್, ಶೇಖರ್, ತಂಗಗಣೇಶ್, ವೇಲಾಯುಧಂ ಉಪಸ್ಥಿತರಿದ್ದರು. ಕೆಜಿಎಫ್ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಿಂದ, ಕರ್ನಾಟಕ ರಾಜ್ಯದ ವಿವಿಧ ತಾಲೂಕು ಮತ್ತು ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಪೊಲೀಸ್ ರಕ್ಷಣಾಧಿಕಾರಿ ಅಜಯ ಹಿಲೋರಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.