ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅವೈಜ್ಞಾನಿಕ ಹಂಪ್‌ಗಳಿಂದ ಅಪಾಯ

Vishwanath S
Updated On : 23 Mar 2014, 1:08 am

ಬಂಗಾರಪೇಟೆ: ರಸ್ತೆಗಳಲ್ಲಿ ಅಪಘಾತ ತಡೆಯುವ ಉದ್ದೇಶದಿಂದ ವಾಹನ ದಟ್ಟನೆ ಹೆಚ್ಚಾಗಿರುವ ಕಡೆ ಹಂಪ್ ನಿರ್ಮಾಣ ಮಾಡಲಾಗುತ್ತದೆ. ಆದರೆ ಪಟ್ಟಣದಲ್ಲಿ ನಿರ್ಮಾಣ ಮಾಡಿರುವ ಅವೈಜ್ಞಾನಿಕ ಹಂಪ್‌ಗಳಿಂದ ಅನುಕೂಲಕ್ಕಿಂತಲೂ ಅನಾನುಕೂಲವೆ ಹೆಚ್ಚಾಗಿದೆ.
ಪಟ್ಟಣದ ಕೆಲವು ಕಡೆ ರಸ್ತೆ ಅಪಘಾತ ಹೆಚ್ಚಾಗಿರುವುದರಿಂದ ವಿಧಿಯಿಲ್ಲದೆ ಉಬ್ಬುಗಳನ್ನು ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಿದೆ ಆದರೆ ಅವು ಹಲವು ಲೋಪಗಳಿಂದ ಕೂಡಿರುವುದರಿಂದ ವಾಹನ ಸವಾರರಿಗೆ ಮೃತ್ಯಕೂಪವಾಗಿ ಭಾದಿಸುತ್ತಿದೆ. ಹಂಪ್‌ಗಳಿಗೆ ಬಣ್ಣ ಬಡಿದು ಸ್ವಷ್ಟವಾಗಿ ಗೋಚರಿಸುವಂತಿರಬೇಕು. ಇಲ್ಲದಿದ್ದರೆ ಅತಿ ವೇಗವಾಗಿ ಬರುವ ವಾಹನ ಸವಾರರಿಗೆ ತಿಳಿಯದೆ ಅಪಘಾತಗಳು ಸಂಭವಿಸಬಹುದು, ಆದರೆ ಪಟ್ಟಣದಲ್ಲಿ ಅಂತಹ ಯಾವುದೇ ಕಾರ್ಯ ನಡೆದಿಲ್ಲ.

ನಲಮಾಚನಹಳ್ಳಿ ಕರ್ಣಾಟಕ ಬ್ಯಾಂಕ್ ಶಾಖೆ ಉದ್ಘಾಟನೆ
ಚಿಂತಾಮಣಿ: ಬ್ಯಾಂಕಿನಿಂದ ದೊರೆಯುವ ಸವಲತ್ತುಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಂಡು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರ್ಣಾಟಕ ಬ್ಯಾಂಕ್ ಮಹಾ ಪ್ರಬಂಧಕರಾದ ಎಂ.ಎಸ್.ಮಹಾಭಲೇಶ್ವರ್ ಹೇಳಿದರು. ಅವರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯ ನಲಮಾಚನಹಳ್ಳಿ ಗ್ರಾಮದಲ್ಲಿ 574ನೇ ಕರ್ಣಾಟಕ ಬ್ಯಾಂಕ್ ಶಾಖೆ ಉದ್ಘಾಟಿಸಿದ ನಂತರ ಮಾತನಾಡಿ, ಗ್ರಾಮೀಣ ಪ್ರದೇಶದ ರೈತಾಪಿ ಜನ ಹಾಗೂ ಮಧ್ಯಮ ವರ್ಗದ ಅನುಕೂಲಕ್ಕಾಗಿ ತಮ್ಮ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ದೇಶಾದ್ಯಂತ ಅಂತರ್ಜಾಲ ವ್ಯವಸ್ಥೆ ಹೊಂದಿರುವ ಸ್ವದೇಶಿ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಎಂದರು. ಸರ್ಕಾರಿ ಬಾಲಕರ ಕಾಲೇಜಿನ ಪ್ರಾಂಶುಪಾಲ ಪ್ರೊ. ಬ್ರಹ್ಮಚಾರಿ ಮಾತನಾಡಿದರು. ವ್ಯವಸ್ಥಾಪಕರಾದ ರವಣಪ್ಪ, ಅಧಿಕಾರಿಗಳಾದ ಶ್ರೀಧರ್, ಅಶೋಕ್, ಗ್ರಾಮ ಮುಖಂಡರಾದ ಈಶ್ವರರೆಡ್ಡಿ, ಈರಪ್ಪರೆಡ್ಡಿ, ರಾಮಮೋಹನರೆಡ್ಡಿ ಇದ್‌ಕ್ದರು.

ವಿದ್ಯುತ್ ಕಡಿತ ವಿರೋಧಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ
ಬಂಗಾರಪೇಟೆ: ಮಕ್ಕಳ ಪರೀಕ್ಷೆ ವೇಳೆ ಬೆಸ್ಕಾಂ ಇಲಾಖೆ ಬೇಕಾ ಬಿಟ್ಟಿಯಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗಿದ್ದು ಕೂಡಲೆ ಲೋಡ್ ಶೆಡ್ಡಿಂಗ್ ನಿಲ್ಲಸಬೇಕೆಂದು ಆಗ್ರಹಿಸಿ ದಲಿತ ಸಮಾಜ ಸೇನೆ ಮುಖಂಡರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸರ್ಕಾರವೇ ವಿದ್ಯಾರ್ಥಿಗಳ ಪರೀಕ್ಷೆ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂದು ಹೇಳಿದೆ, ಆದರೆ ತಾಲೂಕಿನಲ್ಲಿ ನಾಲ್ಕೈದು ದಿನಗಲಿಂದ ಯಾವುದೇ ಸೂಚನೆಯಿಲ್ಲದೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕುಡಿಯುವ ನೀರಿಗೂ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್, ತಾಲೂಕು ಅಧ್ಯಕ್ಷ ದೇವಗಾನಹಳ್ಳಿ ಯತೀಶ್, ಹುಣಸನಹಳ್ಳಿ ರಮೇಶ್, ಸ್ವಾಮಿ, ಆಟೋ ಜಾನ್, ರಾಧ, ಪೀಳಪ್ಪ ಇದ್ದರು.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ಪ್ರಕರಣ ದಾಖಲು
ಚಿಂತಾಮಣಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸ್ಥಾನದಲ್ಲಿದ್ದ ಶಾಸಕರು ಜನರಿಗೆ ಪ್ರಚೋದನೆ ನೀಡಿ ಶವವನ್ನು ಸರ್ಕಾರಿ ಜಮೀನಿನಲ್ಲೇ ಹೂಳಲು ಹೇಳಿ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಮತ್ತಿತರ ಅಧಿಕಾರಿಗಳ ಮೇಲೆ ಚಿಕ್ಕಬಳ್ಳಾಪುರ ಎಸ್ಪಿ ಡಾ. ದಿವ್ಯಾ ಗೋಪಿನಾಥ್ ಕೇಸ್ ದಾಖಲು ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿನ ಸರ್ಕಾರಿ ವಿವಾದಿತ ಸರ್ಕಾರಿ ಜಮೀನು ಸರ್ವೆ ನಂ.188ರಲ್ಲಿ ಕೊಲೆಯಾದ ನಂಜರೆಡ್ಡಿ ಶವವನ್ನು ಹೂಳದಂತೆ ಜಿಲ್ಲಾಧಿಕಾರಿ ಡಾ. ವಿಶಾಲ್ ಆದೇಶಿಸಿದ್ದರು. ಆದರೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ನಂಜರೆಡ್ಡಿ ಪಾರ್ಥೀವ ಶರೀರವನ್ನು ಸರ್ಕಾರಿ ಜಮೀನಿನಲ್ಲೇ ಹೂಳಬೇಕೆಂದು ಪ್ರಚೋದನೆ ನೀಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆಯೆಂದು ತಿಳಿಸಿದ್ದಾರೆ.

ಹಣಕ್ಕಾಗಿ ರಾಜಕೀಯ ಮಾಡುವವರನ್ನು ದೂರ ಇಡಿ
ಬಂಗಾರಪೇಟೆ: ಹಣಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿಗಳನ್ನು ಶಾಶ್ವತವಾಗಿ ದೂರ ಇಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಲೋಕಸಭೆಗೆ ಬಿಜೆಪಿಯಿಂದ ಸ್ಪರ್ದಿಸಿರುವ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಈ ಹಿಂದೆ ರಾಜಕೀಯವಾಗಿ ಅತಂತ್ರರಾಗಿದ್ದಾಗ ಅವರನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಪಕ್ಷಕ್ಕೆ ಕರೆ ತಂದು ಶಾಸಕರನ್ನಾಗಿ ಮಾಡಿದರು. ಆದರೆ ಅವರು ಹಣದ ಆಮೀಷಕ್ಕೆ ಬಲಿಯಾಗಿ ಶಾಸಕ ಸ್ಥಾನವನ್ನು ಮಾರಿಕೊಂಡು ಬಿಜೆಪಿಗೆ ಹಾರಿದರು ಎಂದು ಆರೋಪಿಸಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಮಂಜುನಾಥ್, ಪುರಸಭೆ ಅಧ್ಯಕ್ಷ ಗಂಗಮ್ಮ, ಸದಸ್ಯ ಕೆ. ಚಂದ್ರಾರೆಡ್ಡಿ, ಚಂದ್ರಪ್ಪ ಇದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ಕರವೇ ಆಗ್ರಹ
ಕೆಜಿಎಫ್: ನಗರ ಹಾಗೂ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಪರಿಹಾರಕ್ಕೆ ನಗರಸಭೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರವೇ(ಸ್ವಾಭಿಮಾನಿ ಬಣ) ಕಾರ್ಯಕರ್ತರು ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ಅವರಿಗೆ ಮನವಿ ಸಲ್ಲಿಸಿದರು. ಜೆಡಿಎಸ್ ಮುಖಂಡ ಎಂ.ಭಕ್ತವತ್ಸಲಂ ಅವರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಕರವೇ ಕಾರ್ಯಕರ್ತರು ನಗರದ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು. ಇದೀಗ ನಗರಸಭೆ ಬಸ್ ನಿಲ್ದಾಣ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಕಾಮರಾಜರ್ ಅವರ ಪ್ರತಿಮೆಯನ್ನು ಉರಿಗಾಂ ವ್ಯಾಪ್ತಿಯ ಫೈವ್‌ಲೈಟ್ಸ್ ವೃತ್ತದ ಉದ್ಯಾನವನದಲ್ಲಿ ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಕೃಷ್ಣಯ್ಯಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೆ ತಡೆ
ಬೆಂಗಳೂರು: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಅನಿರೀಕ್ಷಿತ ತಡೆ ಬಿದ್ದಿದೆ.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಒತ್ತಾಸೆಯ ಮೇರೆಗೆ ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇದಕ್ಕೆ ಶನಿವಾರ ಮುಹೂರ್ತ ನಿಗದಿಪಡಿಸಲಾಗಿತ್ತು. ಆದರೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಯತ್ನ ಕೈ ಬಿಡಲು ರಾಜ್ಯ ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ. ಸಚಿವ ಕೆ.ಎಚ್. ಮುನಿಯಪ್ಪ ಮಾತ್ರ ಪಟ್ಟು ಬಿಟ್ಟಿರಲಿಲ್ಲ. ಹೀಗಾಗಿ ರಹಸ್ಯ ಸಮೀಕ್ಷೆ ನಡೆಸಿದ ಕಾಂಗ್ರೆಸ್, ಕೃಷ್ಣಯ್ಯ ಶೆಟ್ಟಿ ಅವರ ಸೇರ್ಪಡೆಗೆ ವಿರೋಧವಿರುವುದನ್ನು ಮನಗಂಡಿದೆ.ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೂ ಈ ಬಗ್ಗೆ ಒಲವಿರಲಿಲ್ಲ ಎಂದು ತಿಳಿದು ಬಂದಿದೆ.

ಪೇಜಾವರ ಶ್ರೀಗಳಿಂದ ಚಂಪಕಧಾಮ ಉದ್ಘಾಟನೆ
ಮಾಲೂರು: ಹಿಂದೂ ಧರ್ಮದ ಪ್ರಚಾರಕ್ಕಾಗಿ ಪಟ್ಟಣದಲ್ಲಿ ಸ್ಥಾಪಿಸುತ್ತಿರುವ ಲಕ್ಷ್ಮಿ ಚಂಪಕಧಾಮ ಧಾರ್ಮಿಕ ಮಂದಿರದ ಉದ್ಘಾಟನೆಯನ್ನು ಬುಧವಾರ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಗಳವರು ನೆರವೇರಿಸಲಿದ್ದಾರೆ ಎಂದು ಧಾರ್ಮಿಕ ಮಂದಿರದ ಸ್ಥಾಪಕ ಪಿ.ಎಸ್. ಅಂಜನ್ ಕುಮಾರ್ ಶರ್ಮ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂಧರ್ಮ ಉಳಿಸಿ ಬೆಳೆಸಬೇಕೆಂಬ ಶ್ರೀಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಧಾರ್ಮಿಕ ಮಂದಿರ ಸ್ಥಾಪಿಸಲಾಗುತ್ತಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳಿಗೆ ಸ್ತೋತ್ರ ಮತ್ತು ವೇದ ಪಾಠದ ತರಗತಿ ಪ್ರಾರಂಭಿಸಲಾಗುತ್ತಿದೆ. ಜಾತ್ಯತೀತವಾಗಿ ನಡೆಯಲಿರುವ ಈ ವೇದ ಪಾಠ ಕಲಿಕೆ ತರಗತಿಯಲ್ಲಿ ಯಾವ ವಯಸ್ಸಿನ, ಜಾತಿಯ ಭೇದವಿಲ್ಲದೆ ಭಾಗವಹಿಸಬಹುದಾಗಿದೆ. ಸ್ವಾಮೀಜಿ ಅವರು 26 ರ ಮಧ್ಯಾಹ್ನ 3.30ಕ್ಕೆ ಮಂದಿರ ಉದ್ಘಾಟನೆ ಮಾಡಲಿದ್ದಾರೆ.

ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಲಿದೆ
ಮಾಲೂರು: ಕೋಲಾರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಲಿದೆ ಎಂದು ಕಾಂಗ್ರೆಸ್ ಮುಖಂಡ ಚೆನ್ನಕೇಶವ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತನಾಡಿ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪರವರ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದು, ಕಾಂಗ್ರೆಸ್ ಜಯಗಳಿಸಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆನ್ನರಾಯಪ್ಪ ಮಾತನಾಡಿ, ಹಣ ಇರುವುದರಿಂದ ರಾಜಕೀಯ ಪ್ರವೇಶ ಮಾಡಿದವರೂಬ್ಬರಾದರೆ, ಹಣಕ್ಕಾಗಿ ತಮ್ಮ ಸೀಟುನ್ನು ಮಾರಿಕೊಂಡ ಅಭ್ಯರ್ಥಿ ಮತ್ತೊಬ್ಬರು ಈ ಬಾರಿ ಕೇಂದ್ರ ಸಚಿವರನ್ನು ಎದುರಿಸುತ್ತಿದ್ದು, ಜನತೆ ಮುನಿಯಪ್ಪರನ್ನು ಲೋಕಸಭೆಗೆ ಕಳುಹಿಸಲಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ರಘುನಾಥ್ ಇದ್ದರು.

ಮತದಾನದ ಕುರಿತು ಜಾಗೃತಿ ಜಾಥಾ
ಗುಡಿಬಂಡೆ: ಪಟ್ಟಣದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2014ರ ಲೋಕಸಭಾ ಚುನಾವಣೆ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದ ಮೂಲಕ ಜನರಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು.
ಜಾಥಾಗೆ ಚಾಲನೆ ನೀಡಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಅಜಿತ್ ಪ್ರಸಾದ್ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದು, 18 ವರ್ಷ ಮೇಲ್ಪಟ್ಟ ನಾಗರಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪೋಷಕರಿಂದ ಮಕ್ಕಳು ಪ್ರಮಾಣ ವಿಧಿ ಬೋದನಾ ಪತ್ರಕ್ಕೆ ಸಹಿ ಮಾಡಿಸುವ ಮೂಲಕ ಅವರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಮುಖ್ಯ ಉದ್ದೇಶ ಹೊಂದಲಾಗಿದೆ ಎಂದರು.

ಇಂದು ವೈದ್ಯಕೀಯ ಉಚಿತ ಶಿಬಿರ
ಮಾಲೂರು: ಇಲ್ಲಿನ ಗುಡ್ನಹಳ್ಳಿ ರಸ್ತೆಯ ಸೆಂಟ್ ಮೇರಿಸ್ ಆಸ್ವತ್ರೆ ಯಲ್ಲಿ ಭಾನುವಾರ ವೈದ್ಯಕೀಯ ಉಚಿತ ಶಿಬಿರ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಸಕ್ಕರೆ ಕಾಯಿಲೆ, ಹೃದಯ ರೋಗ, ನರರೋಗ, ಗಂಟಲು, ಕವಿ, ಮೂಗು, ಗರ್ಭಕೋಶ ಕಾಯಿಲೆಗಳು, ಮಕ್ಕಳ ಕಾಯಿಲೆಗಳು, ಶಸ್ತ್ರ ಚಿಕಿತ್ಸೆ ಸಂಬಂಧಿಸಿದ ರೋಗಗಳನ್ನು ಉಚಿತವಾಗಿ ಪರೀಕ್ಷಿಸಲಾಗುವುದು. ವಿಶೇಷವಾಗಿ ಉಚಿತವಾಗಿ ರಕ್ತದ ಒತ್ತಡ, ಕೊಲೊಸ್ಟ್ರಾಲ್ ಪರೀಕ್ಷೆಯನ್ನು ಮಾಡಲಾಗುವುದು. ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಶಿವಕುಮಾರ್, ಡಾ. ಶೇಷಾದ್ರಿ (ಸರ್ಜನ್), ಡಾ. ಲೂಸಿಯನ್ ಮತ್ತು ಡಾ.ಪೌಸಿಯ(ಗೈನಕೋಲೆಸ್ಟ್), ಡಾ. ಅನ್ಬು ಚಲಿಯನ್(ಇ.ಎನ್.ಟಿ), ಡಾ. ನವೀನ್(ಮಕ್ಕಳ ತಜ್ಞ), ಡಾ. ಸತೀಶ್ ಭಾಗವಹಿಸಿದ್ದು, ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಶಿಬಿರ ನಡೆಯಲಿದೆ ಎಂದು ಆಸ್ವತ್ರೆ ವೈದ್ಯಾಧಿಕಾರಿ ಡಾ. ಲೂಸಿಯನ್ ತಿಳಿಸಿದ್ದಾರೆ.

ಮತದಾನ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ
ಶಿಡ್ಲಘಟ್ಟ: ಚುನಾವಣಾ ಆಯೋಗದ ಸೂಚನೆಯಂತೆ ಪಟ್ಟಣದಲ್ಲಿ ಶಾಲಾ ಮಕ್ಕಳಿಂದ ಜನ ಜಾಗೃತಿ ಕಾರ್ಯಕ್ರಮ ಹಾಗೂ ಈದರೆ ಕಲಾ ತಂಡದಿಂದ ಮತದಾನದ ಬಗ್ಗೆ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಮತದಾನದ ಬಗ್ಗೆ ಪಟ್ಟಣ ಹಾಗೂ ಗ್ರಾಮಾಂತರ ಜನರಿಗೆ ಜಾಗೃತಿ ಮೂಡಿಸಲು ವಾರ್ತಾ ಇಲಾಖೆಯ ಸಹಯೋಗದಲ್ಲಿ ಪಟ್ಟಣದಲ್ಲಿ ಈದರೆ ಕಲಾವಿದರಿಂದ ಬೀದಿ ನಾಟಕವನ್ನು ಬಸ್ ನಿಲ್ದಾಣದಲ್ಲಿ, ಕೋಟೆ ಸರ್ಕಲ್, ಜೂನಿಯರ್ ಕಾಲೇಜ್ ಬಳಿ ಪ್ರದರ್ಶಿಸಲಾಯಿತು. ನಾಟಕದಲ್ಲಿ ಮತದಾನದ ಮಹತ್ವ, ಗುರುತಿನ ಚೀಟಿ ಪಡೆಯುವುದು ಹೇಗೆ, ಎಲ್ಲಿ ಪಡೆಯುವುದು, ಯಾವ ಪಾರಂ ಯಾವುದಕ್ಕೆ ತುಂಬಬೇಕು ಎಂಬ ಸಮಗ್ರ ಮಾಹಿತಿಯನ್ನು ಜನರಿಗೆ ತಿಳಿಸಲಾಯಿತು. ಶಾಲಾ ಮಕ್ಕಳು ಬಿತ್ತಿಪಲಕಗಳನ್ನು ಪ್ರದರ್ಶಿಸುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ದಾಖಲೆಗಳಿಲ್ಲದ ರೇಷ್ಮೆ ಸೀರೆಗಳ ವಶ
ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 172 ರೇಷ್ಮೆ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಾಹನದ ಚಾಲಕ ಸೇರಿದಂತೆ ಮೂವರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ತಾಲೂಕಿನ ಚದಲಪುರ ಕ್ರಾಸ್ ಬಳಿ ಇರುವ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸ್ಥಾಪಿಸಿದ್ದ ಚೆಕ್ ಪೋಸ್ಟ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆಂಧ್ರದ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿನಲ್ಲಿ 172 ರೇಷ್ಮೆ ಸೀರೆಗಳು ಪತ್ತೆಯಾಗಿವೆ. ಚುನಾವಣಾ ವಿಚಕ್ಷಣದಳ ಮತ್ತು ಪೊಲೀಸರು ರೇಷ್ಮೆ ಸೀರೆಗಳಿಗೆ ದಾಖಲೆ ಕೇಳಿದಾಗ ವಾಹನದ ಚಾಲಕ ರವೀಶ್ ತೋರಿಸಲು ವಿಫಲನಾಗಿದ್ದು ಇದರಿಂದ ಪೊಲೀಸರು ಕಾರು ಸೇರಿದಂತೆ ಸುಮಾರು 13 ಲಕ್ಷ ರು. ಮೌಲ್ಯದ ಮಾಲನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಚುನಾವಣಾ ವಿಚಕ್ಷಣ ದಳದ ಅಧಿಕಾರಿ ಕೃಷ್ಣಪ್ಪ ಕಾರ್ಯಾಚರಣೆಯಲ್ಲಿದ್ದರು.

ರಾಜಕಾರಣಿಗಳು ಜಿಲ್ಲೆಗೆ ನೀರಿನ ಹೊಳೆ ಹರಿಸಲಿ
ಶಿಡ್ಲಘಟ್ಟ: ಇಚ್ಚಾಶಕ್ತಿ ಇರುವ ರಾಜಕಾರಣಿಗಳು ನೀರಿನ ಹೊಳೆ ಹರಿಸಲಿ ಎಂದು ಮಳ್ಳೂರು ಹರೀಶ್ ಸವಾಲು ಹಾಕಿದರು. ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವ ಸಂಸ್ಥೆ ಮಾ.22ನ್ನು ವಿಶ್ವ ಜಲ ದಿನಾಚರಣೆಯಾಗಿ ಆಚರಿಸುತ್ತಿದ್ದು ನೀರಿನ ಬಗ್ಗೆ ಅರಿವು ಮೂಡಿಸಲಾಯಿತು. ನೀರಾವರಿ ತಜ್ಞ ಡಾ. ಪರಮಶಿವಯ್ಯನವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ನೀರಿನ ಮಡಿಕೆಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯ ಮಳ್ಳೂರು ಹರೀಶ್ ಮಾತನಾಡಿ, 30 ವರ್ಷಗಳ ಹಿಂದೆ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದವು, ಗಿಡಮರಗಳು ಯತ್ತೇಚವಾಗಿತ್ತು, ಆದರೆ ಇಂದು ಮರಗಳು ಕಡಿಮೆಯಾಗಿ ಮಳೆ ಬರದೆ ಕೆರೆಗಳು ತುಂಬದೆ ನೀರು ಸಿಗುವುದು ಕಷ್ಟವಾಗಿದೆ. ಆದ್ದರಿಂದ ಯಲ್ಲಿ ನೀರನ್ನು ಉಳಿಸಬೇಕಾಗಿದೆ ಎಂದರು.

ಸೇಂಟ್ ಥಾಮಸ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ಸೇಂಟ್ ಥಾಮಸ್ ಚಾರಿಟೇಬಲ್ ಟ್ರಸ್ಟ್‌ನ ಪ್ರಥಮ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯನ್ನು ನಗರದ ಮೆರ್ಸಿ ಹೋಮ್‌ನಲ್ಲಿ ಆಯೋಜಿಸಲಾಗಿತ್ತು.  ಸಭೆಯಲ್ಲಿ ಹಾಜರಿದ್ದ ಮುಖಂಡರಾದ ವಿಕ್ಟರ್‌ಜಬಮಣಿ ಹಾಗೂ ಮೆಲ್ವಿನ್ ಅವರ ತೀರ್ಮಾನದಂತೆ ಟ್ರಸ್ಟ್‌ನ ಅಧ್ಯಕ್ಷ ಶಿವರಾಜನ್, ಉಪಾಧ್ಯಕ್ಷ ಜಯಚಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಕಿಶೋರ್‌ಕಿರಣ್, ಜಂಟಿ ಕಾರ್ಯದರ್ಶಿ ಪ್ರಭು, ಖಜಾಂಚಿ ವೈರಮಣಿ, ಸದಸ್ಯರಾದ ಅರುಣ್‌ವಿಜಯ್, ರಾಜೇಶ್‌ಕುಮಾರ್, ಮೇಯ್‌ಅಳಗನ್, ಇಮಾನ್ಯುಲ್, ರವಿನಾಥ್, ಜಾನಕಿರಾಮನ್, ಕ್ರಿಸ್ಟೋಫರ್, ಕಾನೂನು ಸಲಹೆಗಾರರಾಗಿ ವಕೀಲ ರಾಯರ್ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ನಂತರ ಸಲ್ಡಾನ ವೃತ್ತದಲ್ಲಿರುವ ಸರ್ಕಾರಿ ಕನ್ನಡ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ಹಾಗೂ ಆರನೇ ತರಗತಿಯ ಸುಮಾರು 130 ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಶಿಸ್ತು ಪರಿಪಾಲನೆ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಚಾರ್ಟ್‌ಗಳನ್ನು ಪ್ರದರ್ಶಿಸಿ ಅರಿವು ಮೂಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement