ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ವಿಫಲ: ಕೃಷ್ಣಾರೆಡ್ಡಿ
ಚಿಂತಾಮಣಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿದೆಯೆಂದು ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕಿಡಿ ಕಾರಿದರು.
ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿ ಭೂವಿವಾದ ವಿಷಯವಾಗಿ ಕೊಲೆಯಾದ ಜೆಡಿಎಸ್ ಮುಖಂಡ ನಂಜರೆಡ್ಡಿ ಪಾರ್ಥೀವ ಶರೀರಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೂಮಾಲೆ ಹಾಕಿ ಸಂತಾಪ ಸೂಚಿಸಿದರು.
ನಂತರ ಮಾತನಾಡಿ, ದೊಡ್ಡಗಂಜೂರು ಗ್ರಾಮವು ತಾಲೂಕಿನಲ್ಲೇ ಅತಿ ಸೂಕ್ಷ್ಮ ಗ್ರಾಮವಾಗಿದ್ದು, ಇಲ್ಲಿನ ವಿದ್ಯಮಾನಗಳ ಬಗ್ಗೆ ಹಲವು ಬಾರಿ ಪೊಲೀಸ್ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದರೂ ಬೇಜವಾಬ್ದಾರಿ ತೋರಿದ್ದಾರೆ. ಜೆಡಿಎಸ್ ಮುಖಂಡ ಕೊಲೆಯಾಗಲು ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆರೋಪಿಸಿದರು.
ತಾಲೂಕು ದಂಡಾಧಿಕಾರಿ ಜಿ.ವಿ.ಹನುಮಂತರೆಡ್ಡಿ ತಾಲೂಕು ಆಡಳಿತ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಇವರ ಬೇಜವಾಬ್ದಾರಿಯಿಂದಲೇ ಗ್ರಾಮದಲ್ಲಿ ಅಶಾಂತಿ ಉಂಟಾಗಿದೆ ಎಂದರು. ಗಲಾಟೆ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ನಾಮ್ಕೆವಾಸ್ತೆ ಇಬ್ಬರು ಪೇದೆಗಳನ್ನು ಘಟನಾ ಸ್ಥಳಕ್ಕೆ ಕಳಿಸಿದ್ದಾರೆ. ಅವರು ಬಂದರೂ ಕೊಲೆ ನಡೆದೇ ಹೋಯ್ತು. ಇದಕ್ಕೆ ನೇರ ಹೊಣೆಗಾರರಾಗಿರುವ ತಾಲೂಕು ದಂಡಾಧಿಕಾರಿ ಜಿ.ವಿ.ಹನುಮಂತರೆಡ್ಡಿ ಮತ್ತು ಡಿವೈಎಸ್ಪಿ ಸಣ್ಣತಿಮ್ಮಪ್ಪ ಅವರನ್ನು ಸರ್ಕಾರ ಈ ಕೂಡಲೇ ಅಮಾನತು ಪಡಿಸಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಒತ್ತಾಯಿಸಿದರು.
ಹಿಂದೆ ಇದ್ದ ತಾಲೂಕು ದಂಡಾಧಿಕಾರಿ ವರ್ಗಾವಣೆಯಾದ ನಂತರ ಗ್ರೇಡ್ 1 ತಹಶೀಲ್ದಾರ್ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದರೂ ಗ್ರೇಡ್ 2 ತಹಶೀಲ್ದಾರ್ ಆಗಿರುವ ಜಿ.ವಿ.ಹನುಮಂತರೆಡ್ಡಿಯವರನ್ನು ನೇಮಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.