ಜೆಡಿಎಸ್ ಅಭ್ಯರ್ಥಿ ವಿರುದ್ಧ ಆರು ಚೆಕ್ ಬೌನ್ಸ್ ಕೇಸು
ಕೋಲಾರ: ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೇಶವ ವಿರುದ್ಧ ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ವಂಚನೆ ಹಾಗೂ ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ ಆರು ಪ್ರಕರಣಗಳಿವೆ.
ಚೆಕ್ ಬೌನ್ಸಿಂಗ್ ಒಂದು ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.
ಈ ಅಂಶಗಳನ್ನು ಸ್ವತಃ ಜೆಡಿಎಸ್ ಅಭ್ಯರ್ಥಿ ಕೇಶವ ಶುಕ್ರವಾರ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. ಕೇಶವರ ಅಫಿಡಿವಿಟ್ ಪ್ರಕಾರ 2ಲಕ್ಷರು. ವಂಚನೆಗೆ ಸಂಬಂಧಿಸಿದಂತೆ ಎಂ. ನಾರಾಯಣಸ್ವಾಮಿ ಎಂಬುವರ ಐಪಿಸಿ 420(ವಂಚನೆ) ಕೇಸು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿದ್ದು ವಿಚಾರಣೆಗೆ ಹೈಕೋರ್ಟ್ನಿಂದ ತಡೆಯಾಜ್ಞೆ ಸಿಕ್ಕಿದೆ.
ದಿನೇಶ್ ಜೈನ್ ಎಂಬುವರಿಗೆ 2ಲಕ್ಷ ರು. ವಂಚನೆ ಪ್ರಕರಣ ಇದೇ ನ್ಯಾಯಾಲಯದಲ್ಲಿದ್ದು ಇನ್ನೂ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಡಾ. ಶಂಕರನಾಯಕ್ ಎಂಬುವರಿಗೆ ನೀಡಿದ್ದ ಚೆಕ್ ಬೌನ್ಸಿಂಗ್ಗೆ ಸಂಬಂಧಿಸಿದಂತೆ ಬೆಂಗಳೂರು 12ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ, ರಾಮಕೃಷ್ಣಪ್ಪರಿಗೆ ಸೇರಿದ ಚೆಕ್ ಬೌನ್ಸ್ ಪ್ರಕರಣ ದೇವನಹಳ್ಳಿ ನ್ಯಾಯಾಲಯದಲ್ಲಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ವೀರೇಂದ್ರಬಾಬು ಎಂಬುವರು ಐಪಿಸಿ 418(ನಕಲಿ ದಾಖಲೆ ಸೃಷ್ಟಿ), 419(ಬೇನಾಮಿ ವ್ಯಕ್ತಿ ಬಳಕೆ) ಮತ್ತು 420(ವಂಚನೆ) ಸೆಕ್ಷನ್ ಪ್ರಕಾರ ಹೂಡಿರುವ ಪ್ರಕರಣ ದೇವನಹಳ್ಳಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು
ಕೋಲಾರ: ಜೆಡಿಎಸ್ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಒಪ್ಪದಿರುವುದಕ್ಕೆ ಮತ್ತು ಅಭ್ಯರ್ಥಿಯಾಗಿರುವ ಕೆ. ಕೇಶವ ಅವರ ಜಾತಿ ಪ್ರಮಾಣದ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಖಂಡಿಸಿದ್ದಾರೆ.
ಸಿದ್ದಯ್ಯನವರು ಕ್ಷೇತ್ರದಿಂದ ಓಡಿ ಹೋಗಲು ಕಾಂಗ್ರೆಸ್ ನಡೆಸಿದ ಷಡ್ಯಂತ್ರವೇ ಕಾರಣ ಹಾಗೂ ಕೇಶವರವರ ನಾಮಪತ್ರ ವಜಾಗೊಳಿಸುವುದಕ್ಕೆ ಕಾಂಗ್ರೆಸ್ ಪಕ್ಷದವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿ ಮಾಡಿಕೊಳ್ಳುತ್ತಿದ್ದಾರೆಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು ಎಂದು ಹೇಳಿಕೆಯಲ್ಲಿ ಸ್ವಷ್ಟನೆ ನೀಡಿದ್ದಾರೆ. ಜೆಡಿಎಸ್ ಅಧಿಕೃತ ಅಭ್ಯರ್ಥಿ ಕೇಶವರವರ ಜಾತಿ ಪ್ರಮಾಣ ಪತ್ರದ ವಿವಾದಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧವಿಲ್ಲ. ಟಿಕೆಟ್ ವಂಚಿತರಾದ ಅವರದ್ದೇ ಮುಖಂಡರು ಸೃಷ್ಟಿಸಿರುವ ರಾದ್ದಾಂತ ಎಂದು ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಯ 70 ಸಾವಿರ, ಕಾರು ವಶ
ಕೋಲಾರ: ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರಿಗೆ ಸೇರಿದ ರೇಂಜರ್ ರೋಹರ್ ಕಾರಿನಲ್ಲಿ ಅನುಮತಿ ಪಡೆಯದ ಚುನಾವಣಾ ಪ್ರಚಾರ ಸಾಮಾಗ್ರಿಗಳು, 70ಸಾವಿರ ರು.ನಗದು ಹಾಗೂ ಮೊಬೈಲ್ ಫೋನ್ನನ್ನು ಗ್ರಾಮಾಂತರ ಪೊಲೀಸರು ತಾಲೂಕಿನ ಮೂರಾಂಡಹಳ್ಳಿ ಬಳಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ತಮಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರನ್ನು ತಡೆದು ಪರಿಶೀಲನೆ ಮಾಡಿದಾಗ ಹಣ ಮತ್ತು ಪ್ರಚಾರ ಸಾಮಾಗ್ರಿಗಳು ಸಿಕ್ಕಿವೆ. ಈ ಸಂಬಂಧ ಕಾರಿನ ಚಾಲಕ ರಮೇಶ್ ಎಂಬುವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಮಾಧ್ಯಮದವರಿಗೆ ಅಡ್ಡಿ: ಜೆಡಿಎಸ್ ಅಭ್ಯರ್ಥಿಗೆ ಸೇರಿದ ಕಾರು ಮತ್ತು ಅದರಲ್ಲಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಾರ ತಿಳಿದು ಸ್ಥಳಕ್ಕೆ ಹೋಗಿದ್ದ ಮಾಧ್ಯಮದವರ ಮೇಲೆ ಪ್ರೆಸ್ ಲೇಬಲ್ ಹೊಂದಿದ್ದ ಕಾರಿನಲ್ಲಿದ್ದವರು ಅಡ್ಡಿಪಡಿಸಿ ನೋಟುಗಳ ಬಂಡಲ್ಗಳನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆಂದು ದೂರಲಾಗಿದೆ.