ಜೆಡಿಎಸ್ ಮುಖಂಡರ ವಿರುದ್ಧ ಅತೃಪ್ತರ ಆಕ್ರೋಶ
ಕೋಲಾರ: ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೇಶವ್ ಕೆಲವು ಪ್ರಭಾವಿ ಮುಖಂಡರ ಮರ್ಜಿಗೆ ಸೀಮಿತರಾಗಿದ್ದು, ತಾಲೂಕು ಅಧ್ಯಕ್ಷರೂ ಸೇರಿದಂತೆ ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ಅತೃಪ್ತ ಮುಖಂಡರು ಆರೋಪಿಸಿದ್ದಾರೆ.
ನಗರದ ಶಾಂತಿ ಸಾಗರ್ ಹೊಟೇಲ್ನಲ್ಲಿ ಸಭೆ ನಡೆಸಿದ ಅತೃಪ್ತ ಮುಖಂಡರ ಸಭೆಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಮುರಳಿಗೌಡ, ಅಭ್ಯರ್ಥಿ ಕೇಶವ್ ಈವರೆಗೂ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಭೆಯನ್ನೂ ಕರೆದು ಚರ್ಚಿಸದೇ ಕೇವಲ ಕೆಲವು ಮುಖಂಡರೊಂದಿಗೆ ಹೋಗಿ ರಾಜಕೀಯ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭಾ ಸದಸ್ಯ ಅಪ್ರೋಜ್ ಪಾಷ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸುತ್ತ ಇರುವ ಕೆಲವು ಮುಖಂಡರು ಕೇಶವ್ರನ್ನು ನಾವು ಗೆಲ್ಲಿಸಿ ಬಿಡುತ್ತೇವೆ ಎಂದು ಹೈಕಮಾಂಡ್ನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಟೀಕಿಸಿ, ಮತ ಹಾಕಿಸೋದು ಕಾರ್ಯಕರ್ತರೇ ಹೊರತು ನಾಯಕರಲ್ಲ, ಅಭ್ಯರ್ಥಿ ಇಲ್ಲಿ ಪಕ್ಷದ ಕಾಯಂ ಕಚೇರಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರಸಭಾ ಸದಸ್ಯ ರವೀಂದ್ರ, ಜೆಡಿಎಸ್ ಉಳಿಯಲು ಕಾರ್ಯಕರ್ತರೇ ಕಾರಣ ಎಂಬುದನ್ನು ಮುಖಂಡರು ಅರಿಯಬೇಕು ಎಂದು ಹೇಳಿದರು.
ಪಕ್ಷದ ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್, ಸಭೆಯಲ್ಲಿ ಚರ್ಚಿಸಿದ್ದನ್ನು ಅಭ್ಯರ್ಥಿ ಕೇಶವ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ತಾಲೂಕಿನ ಮುಖಂಡರು, ಪ್ರತಿನಿಧಿಗಳ ಸಭೆ ಕರೆಯುವುದಾಗಿ ತಿಳಿಸಿದರು. ಸಭೆಯಲ್ಲಿ ಛತ್ರಕೋಡಿಹಳ್ಳಿ ಕುಮಾರ್, ಅಮ್ಮೇರಹಳ್ಳಿ ಸತೀಶ್, ಪುಟ್ಟರಾಜು, ಅಬ್ದುಲ್ ರಹೀಂ, ನಟರಾಜು, ಹೈವೇ ಮಂಜು, ವಿಕಾಸ್ ಬೈರೇಗೌಡ, ಶಶಿಧರ್, ಪುರುಷೋತ್ತಮ್, ಮಂಜುನಾಥ್, ಕಠಾರಿಪಾಳ್ಯ ಮಂಜು, ಸಂತೋಷ್, ಕಾರ್ತಿಕ್, ಅನಿಕೇತ್, ಅರುಣ್, ಖುಷ್ವಂತ್ಸಿಂಗ್, ಮಹೇಶ್, ಮುನಿರಾಜು, ಸುರೇಶ್, ಕೃಷ್ಣ, ಲೋಕಿ, ನಂದ ಮತ್ತಿತರ ಮುಖಂಡರು ಇದ್ದರು.