ದೇಶದ ಅಭಿವೃದ್ಧಿಗೆ ದೃಢ ಸಂಕಲ್ಪ ಅಗತ್ಯ
ಕೋಲಾರ: ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಸ್ವಂತ ನಿರ್ಧಾರ ಕೈಗೊಂಡು ದೇಶದ ಮತ್ತು ವ್ಯಕ್ತಿಗತ ಅಭಿವೃದ್ಧಿಗೆ ದೃಢ ಸಂಕಲ್ಪ ಕೈಗೊಳ್ಳುವುದು ಅಗತ್ಯ ಎಂದು ಹಿರಿಯ ವಿಜ್ಞಾನಿ ಹಾಗೂ ಸಂಶೋಧಕರಾದ ಭಾರತ ರತ್ನ ಸಿಎನ್ಆರ್ ರಾವ್ ಹೇಳಿದರು.
ನಗರದ ಹೊರವಲಯದ ಟಮಕದಲ್ಲಿರುವ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ದೇವರಾಜ್ ಅರಸ್ ವೈದ್ಯಕೀಯ ಕಾಲೇಜಿನ 4ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತದಲ್ಲಿ ಪ್ರತಿಭಾವಂತವರ ಸಂಖ್ಯೆ ಹೆಚ್ಚಿರುವುದರಿಂದಲೇ ಇಲ್ಲಿ ಕಲಿತ ವೈದ್ಯರು, ಎಂಜನಿಯರ್ಗಳು, ನರ್ಸ್ಗಳು ವಿದೇಶದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಿರುವವರು ಹಣ ಹೆಚ್ಚಿಗೆ ಸಿಗುವ ಕಡೆಗೆ ಓಡುವುದರ ಜೊತೆಗೆ ದೇಶ ಸೇವೆ ಮತ್ತು ತಮ್ಮ ಜ್ಞಾನವನ್ನು ದೇಶದ ಅಭಿವೃದ್ಧಿಗಾಗಿ ವಿನಿಯೋಗ ಮಾಡಲು ಗಮನ ನೀಡಿದರೆ ಭಾರತದ ಶಕ್ತಿ ಮತ್ತಷ್ಟು ಹೆಚ್ಚುತ್ತದೆ ಎಂದರು.
ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತದಲ್ಲಿ ವಿಫುಲ ಅವಕಾಶಗಳಿವೆ. ಬೆಂಗಳೂರಿನಲ್ಲೂ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಸಂಶೋಧನಾ ಕೇಂದ್ರಗಳು ಇರುವುದರಿಂದ ಪ್ರತಿಭಾವಂತ ಯುವಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಸೋಲು ಗೆಲವಿನ ಮೆಟ್ಟಲು ಎಂದು ಯಾರು ಭಾವಿಸುತ್ತಾರೋ ಅಂಥವರು ಮುಂದೊಮ್ಮೆ ಉತ್ತಮ ಸಾಧನೆ ಮಾಡಬಲ್ಲರು. ಪದವಿಗಳು ಎಂಬುದು ನಿಮಗೆ ಕೇವಲ ಲೈಸೆನ್ಸ್ ಅಷ್ಟೇ. ಗುರಿ ಸಾಧನೆಯ ಜೊತೆ ವೃತ್ತಿಯಲ್ಲಿ ಉತ್ತುಂಗಕ್ಕೆ ಏರಲು ಶ್ರಮಿಸಿದಾಗ ಫಲ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಭಾರತ ವೈಜ್ಞಾನಿಕ ಸಂಸ್ಥೆಯ ನಿರ್ದೇಶಕ ಪದ್ಮಭೂಷಣ ಡಾ.ಪಿ.ಬಲರಾಮ ಅವರಿಗೆ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಸಂಸ್ಥೆಯ ಕುಲಾಧಿಪತಿ ರಾಜೇಶ್ ಎನ್.ಜಗದಾಳೆ ಅವರು ಎಂ.ಡಿ. ಆನರ್ಸ್ ಪದವಿ ಸಮರ್ಪಣೆ ಮಾಡಿದರು. ಭಾರತರತ್ನ ಸಿಎನ್ಆರ್ ರಾವ್ ಅವರನ್ನು ಶ್ರೀ ದೇವರಾಜ್ ಅರಸ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಆರ್.ಎಲ್.ಜಾಲಪ್ಪ ಸನ್ಮಾನಿಸಿದರು.
ಎಂಬಿಬಿಎಸ್ನ 119, ಸ್ನಾತಕೋತ್ತರ ಪದವಿಯ 62, ಸ್ನಾತಕೋತ್ತರ ಡಿಪ್ಲೊಮಾದ ವಿವಿಧ ಕೋರ್ಸ್ಗಳ 20 ವಿದ್ಯಾರ್ಥಿಗಳಿಗೆ ಸಂಸ್ಥೆಯ ಕುಲಾಧಿಪತಿ ರಾಜೇಶ್ ಎನ್.ಜಗದಾಳೆ ಪದವಿ ಪ್ರದಾನ ಮಾಡಿ, ಚಿನ್ನದ ಪದಕ ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಸಂಸ್ಥೆಯ ಕುಲಪತಿ ಡಾ. ಪ್ರೇಮನಾಥ್ ಎಫ್.ಕೊಟೂರ್ ವರದಿ ವಾಚಿಸಿದರು. ಕುಲಸಚಿವ ಡಾ. ಕುಟ್ಟಿ ಅತಿಥಿಗಳ ಪರಿಚಯ ಮಾಡಿದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್, ಡಾ.ಲಕ್ಷ್ಮಯ್ಯ, ಡಾ.ಚಂದ್ರಪ್ಪ, ಡಾ.ಶ್ರೀರಾಮ್ ಇದ್ದರು.